ಹಾವೇರಿ: ಬಿಜೆಪಿ ಎನ್ನುವುದು ಈಗ ಭ್ರಷ್ಟ ಜನತಾ ಪಾರ್ಟಿ ಆಗಿದ್ದು, ಕೊರೊನಾ ಹೆಣದ ಮೇಲೆ ಹಣ ಮಾಡುವ ಕಾರ್ಯವನ್ನು ಸರ್ಕಾರಗಳು ನಡೆಸಿವೆ. ಕೊರೊನಾ ಸಾವಿನ ಸಂಖ್ಯೆಯಲ್ಲೂ ಸುಳ್ಳು ಲೆಕ್ಕಾಚಾರ ತೋರಿಸಲಾಗುತ್ತಿದೆ. ಈ ಸರ್ಕಾರಕ್ಕೆ ಹೃದಯ, ಇಚ್ಛಾಶಕ್ತಿಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ದೂರಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು. ಈಗ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಅದರ ಮಾರ್ಗಸೂಚಿ ನೋಡಿದರೆ ಪರಿಹಾರ ಕೊಡುವ ಮನಸ್ಸು ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎಂದರು.
ಕಳೆದ ವರ್ಷ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದರು. ಈಗ ಮತ್ತೆ ಕೊರೊನಾ ನಿರ್ವಹಣೆಗೆ 23 ಸಾವಿರ ಕೋಟಿ ರೂ. ಘೋಷಿಸಿದ್ದಾರೆ. ಪಿಎಂ ಕೇರ್ಸ್‌ನಲ್ಲಿ ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಲಾಗಿದೆ. 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೋರಾಟ: ಕೊರೊನಾದಿಂದ ಜನರು ಸಾಯುತ್ತಿದ್ದರೂ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಸಿಎಂ ಕಾಲ ಕಳೆಯುತ್ತಿದ್ದಾರೆ. ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಆಕ್ಸಿಜನ್ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಜನರು ಪ್ರಾಣ ಬಿಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಣ ಬಗ್ಗೆ ಗಮನ ಹರಿಸುವುದು ಬಿಟ್ಟು ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸಿಎಂ ಹಾಗೂ ಅವರ ಮಗನೇ ಭ್ರಷ್ಟಾಚಾರ ನಡೆಸುತ್ತಿರುವುದಾಗಿ ಅವರ ಪಕ್ಷದವರೇ ಆರೋಪಿಸುತ್ತಿದ್ದಾರೆ. ಈ ರೀತಿ ಬಿಜೆಪಿ ಶಾಸಕರು, ಸಚಿವರೇ ಆರೋಪಿಸುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗದಷ್ಟು ಸಿಎಂ ದುರ್ಬಲಗೊಂಡಿದ್ದಾರೆ. ಕೊರೊನಾ, ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ಜನರ ಸಮಸ್ಯೆಗೆ ಸ್ಪಂದನೆ: ಕೇಂದ್ರ-ರಾಜ್ಯ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್‌ನಿಂದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಪಕ್ಷದಿಂದ ಸುಮಾರು 2.05 ಕೋಟಿ ಜನರಿಗೆ ನೆರವು ನೀಡಲಾಗಿದೆ. ಪಕ್ಷದಿಂದ 58 ಲಕ್ಷ ಮಾಸ್ಕ್ ವಿತರಿಸಲಾಗಿದೆ. 3.25 ಲಕ್ಷ ಪಿಪಿಇ ಕಿಟ್‌ಗಳನ್ನು ನೀಡಲಾಗಿದೆ. 93 ಲಕ್ಷ ಜನರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಗಿದೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಆದರೆ, ಸರ್ಕಾರಗಳ ಚರ್ಮ ದಪ್ಪಗಾಗಿದೆ. ಪೆಟ್ರೋಲ್, ಡೀಸೆಲ್, ದಿನಬಳಕೆ ಸಾಮಗ್ರಿಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳು ಬೆಲೆ ಏರಿಕೆಯಿಂದ ಬೀದಿಪಾಲಾಗಿವೆ ಎಂದು ಆರೋಪಿಸಿದರು.
ಪಕ್ಷ ಸಂಘಟನೆಗೆ ಆದ್ಯತೆ: ಕಾಂಗ್ರೆಸ್ ಪಕ್ಷ ಸಂಘಟನೆ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಷ್ಕ್ರಿಯವಾಗಿರುವ ಸುಮಾರು 15-16 ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಕೆಪಿಸಿಸಿ ಪುನಾರಚನೆ ಆಗಲಿದೆ. ಆ.31ರೊಳಗೆ ಎಲ್ಲ ಪಂಚಾಯಿತಿ ಸಮಿತಿ ರಚನೆ ಮಾಡಲು ಸೂಚಿಸಲಾಗಿದೆ. ಬಳಿಕ ಅಕ್ಟೋಬರ್ ಒಳಗೆ ಎಲ್ಲ ಬೂತ್ ಪುನಾರಚನೆ ಪ್ರಕ್ರಿಯೆ ನಡೆಸಲಿದೆ. ಕಾರ್ಯಕರ್ತರಿಗೆ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಜಿಪಂ-ತಾಪಂ ಚುನಾವಣೆ ಎದುರಿಸಲು ಸಿದ್ಧತೆ ನಡೆಸಲಾಗಿದೆ. ತೆರವಾಗಿರುವ ಸಿಂದಗಿ-ಹಾನಗಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಸೋಮಣ್ಣ ಬೇವಿನಮರದ, ಬಿ.ಎಚ್.ಬನ್ನಿಕೋಡ, ಡಿ.ಬಸವರಾಜು, ಬಾಲರಾಜ್, ಸದಾನಂದ ಡಂಗನವರ, ಪ್ರಕಾಶ ಕೋಳಿವಾಡ, ಸಂಜೀವಕುಮಾರ ನೀರಲಗಿ, ಡಾ|ಸಂಜಯ ಡಾಂಗೆ, ಎಸ್‌ಎಫ್‌ಎನ್ ಗಾಜಿಗೌಡ್ರ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.