Advertisement

ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಹತ್ಯೆ: ಇಬ್ಬರ ಬಂಧನ

02:45 PM Jun 04, 2019 | Suhan S |

ವಿಜಯಪುರ: ಕ್ರಿಮಿನಲ್ ಹಿನ್ನೆಲೆ ಇರುವ ಸೊಲ್ಲಾಪುರ ಮೂಲದ ತೌಫಿಕ್‌ ಜೊತೆಗಿನ ಸ್ನೇಹ ಸಂಬಂಧ ಹಾಗೂ ಹಣಕಾಸಿನ ವ್ಯವಹಾರವೇ ಕಾಂಗ್ರೆಸ್‌ ಕಾರ್ಯಕರ್ತೆ ರೇಷ್ಮಾ ಪಡೇಕನೂರ ಹತ್ಯೆಗೆ ಪ್ರಮುಖ ಕಾರಣ ಎಂಬುದು ಸ್ಪಷ್ಟವಾಗಿದೆ. ರವಿವಾರ ಬಂಧಿತರಾಗಿರುವ ಹತ್ಯೆ ಆರೋಪಿಗಳಾದ ತೌಫಿಕ್‌ ಹಾಗೂ ಇಜಾಜ್‌ ಎಂಬ ಇಬ್ಬರು ಪೊಲೀಸ್‌ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ.

Advertisement

ಮೇ 17ರಂದು ಕೊಲಾØರ ಬಳಿಯ ಕೃಷ್ಣಾ ನದಿ ಸೇತುವೆ ಬಳಿ ಭೀಕರವಾಗಿ ಹತ್ಯೆಯಾಗಿದ್ದ ರೇಷ್ಮಾ ಪಡೇಕನೂರ ಶವ ಪತ್ತೆಯಾಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ ರವಿವಾರ ಹಲಸಂಗಿ ಕ್ರಾಸ್‌ ಬಳಿಯ ಸಾಗರ ಹೊಟೇಲ್ ಹತ್ತಿರ ಬಂಧಿಸಲಾಗಿದೆ. ಹತ್ಯೆ ಬಳಿಕ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದ ಪೊಲೀಸರ ತನಿಖಾ ತಂಡಗಳು ತಲೆ ಮರೆಸಿಕೊಂಡಿದ್ದ ತೌಫಿಕ್‌ ಇಸ್ಮಾಯಿಲ್ ಶೇಖ್‌ ಹಾಗೂ ಇಂಡಿ ತಾಲೂಕು ನಂದ್ರಾಳ ಗ್ರಾಮದ ಇಜಾಜ್‌ ಬಂದೇನವಾಜ್‌ ಬಿರಾದಾರ ಎಂಬವರನ್ನು ಬಂಧಿಸಿದ್ದು, ತೀವ್ರ ವಿಚಾರಣೆ ಬಳಿಕ ಆರೋಪಿಗಳು ತಾವೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಪ್ರಕಾಶ ನಿಕ್ಕಂ, ಹತ್ಯೆಯಾದ ರೇಷ್ಮಾ ಪಡೇಕನೂರ ಹಾಗೂ ಸೊಲ್ಲಾಪುರ ತೌಫಿಕ್‌ ಮಧ್ಯೆ 2015ರಿಂದ ಸ್ನೇಹ ಇದ್ದು, ಪರಸ್ಪರರು ಸೊಲ್ಲಾಪುರ-ವಿಜಯಪುರಕ್ಕೆ ಬಂದು ಭೇಟಿಯಾಗುತ್ತಿದ್ದರು. ಹಲವು ಸಂದರ್ಭಗಳಲ್ಲಿ ರಾತ್ರಿ ವೇಳೆ ಕೊಲಾರ ಪಟ್ಟಣಕ್ಕೆ ಹೋಗಿ ಮೀನು ಆಹಾರ ಸೇವಿಸಿ ಬರುತ್ತಿದ್ದರು. ಇವರಿಬ್ಬರ ಅತಿಯಾದ ಸ್ನೇಹ-ಸಂಬಂಧ ತೌಫಿಕ್‌ ಪತ್ನಿಗೆ ತಿಳಿದು ಜಗಳವಾಗಿ ಪ್ರಕರಣ ಎರಡು ವರ್ಷದ ಹಿಂದೆ ನಗರದ ಜಲನಗರ ಠಾಣೆ ಮೆಟ್ಟಿಲೇರಿತ್ತು. ಇದಲ್ಲದೇ ರೇಷ್ಮಾ ಪಡೇಕನೂರ ಆರೋಪಿ ತೌಫಿಕ್‌ ಹೆಸರಿನಲ್ಲಿರುವ 8 ಎಕರೆ ಜಮೀನನ್ನು ತನ್ನ ಹೆಸರಿಗೆ ಬಿಟ್ಟುಕೊಡುವಂತೆ ಕಿರುಕುಳ ನೀಡುತ್ತಿದ್ದಳು. ಇದಲ್ಲದೇ ರೇಷ್ಮಾ ಹಾಗೂ ತೌಫಿಕ್‌ ಮಧ್ಯೆ ನಡೆದಿದ್ದ ಮೊಬೈಲ್ ಸಂಭಾಷಣೆ ಧ್ವನಿಮುದ್ರಿಕೆ ವೈರಲ್ ಆಗಿತ್ತು.

ಇದರಿಂದ ಬೇಸತ್ತಿದ್ದ ತೌಫಿಕ್‌ ಮೇ 15ರಂದೇ ರೇಷ್ಮಾ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ಇಂಡಿ ತಾಲೂಕಿನ ಇಜಾಜ್‌ ಹಾಗೂ ತಲೆಮರೆಸಿಕೊಂಡಿರುವ ಇನ್ನೊಬ್ಬನ ಸಹಾಯ ಪಡೆದಿದ್ದ. ಪೂರ್ವ ಯೋಜನೆಯಂತೆ ಮೇ 16ರಂದು ಮಧ್ಯ ರಾತ್ರಿ ರೇಷ್ಮಾಳನ್ನು ತನ್ನ ಕಾರಿನಲ್ಲಿ ಕೊಲಾರಕ್ಕೆ ಕರೆದೊಯ್ದು, ಕಾರಿನಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದೇವೆ. ಬಳಿಕ ಶವವನ್ನು ಕೃಷ್ಣಾ ನದಿಗೆ ಎಸೆದಿದ್ದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗೆ ಮತ್ತೆ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದ ಬಳಿಕ ಪ್ರಕರಣ ಇತರೆ ಅಂಶಗಳು ಹೊರ ಬರಲಿವೆ ಎಂದರು.

ಪ್ರಕರಣದ ಪ್ರಮುಖ ಆರೋಪಿ ತೌಫಿಕ್‌ ಮಹಾರಾಷ್ಟ್ರ ರಾಜ್ಯದಲ್ಲಿ ಕೊಲೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ 31 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಇನ್ನೋರ್ವ ಆರೋಪಿ ಇಜಾಜ್‌ ವಿರುದ್ಧ ಇಂಡಿ, ಝಳಕಿ, ರಾಯಬಾಗ, ಚಿಕ್ಕೋಡಿ, ಸೊಲ್ಲಾಪುರ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರದಂಥ ಪ್ರಕರಣಗಳು ದಾಖಲಾಗಿವೆ. ತಲೆ ಮರೆಸಿಕೊಂಡಿರುವ ಇನ್ನೊಬ್ಬನ ಬಂಧನಕ್ಕೆ ಜಾಲ ಬೀಸಿದ್ದು ಆತನ ಕುರಿತು ಹೆಚ್ಚಿನ ಮಾಹಿತಿ ನೀಡಲಾಗದು ಎಂದರು.

Advertisement

ಪ್ರಕರಣದ ತನಿಖೆಗಾಗಿ ಎಎಸ್ಪಿ ಬಿ.ಎಸ್‌.ನೇಮಗೌಡ ನೇತೃತ್ವದಲ್ಲಿ ವಿಜಯಪುರ ಡಿಎಸ್ಪಿ ಆಶೋಕ, ಬಸವನಬಾಗೇವಾಡಿ ಡಿಎಸ್ಪಿ ಮಹೇಶ್ವರಗೌಡ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಡಗಳು ತಲೆಮರೆಸಿಕೊಂಡಿದ್ದ ಆರೋಪಿಗಳು ಇರುವ ಖಚಿತ ಮಾಹಿತಿ ಅಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next