ನವದೆಹಲಿ: ಹರಿಯಾಣದ ಅಸ್ಸಾಂಧ್ ಪ್ರದೇಶದಿಂದ ಸ್ಪರ್ಧಿಸುತ್ತಿರುವ ಬಕ್ಷೀಶ್ ಸಿಂಗ್ ವಿರಕ್ ಅವರನ್ನು ಬಿಜೆಪಿಯ ಅತ್ಯಂತ ಪ್ರಮಾಣಿಕ ವ್ಯಕ್ತಿ ಎಂದು ರಾಹುಲ್ ಗಾಂಧಿ ಕರೆದಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಆಪ್‌ಲೋಡ್ ಮಾಡಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯ ಬಿಜಿಪಿ ಅಭ್ಯರ್ಥಿಯಾಗಿರುವ ಬಕ್ಷೀಶ್ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಲ್ಲಿ (ಇವಿಎಂ) ಯಾವ ಬಟನ್ ಅನ್ನು ಒತ್ತಿದರೂ ಮತಗಳು ಆಡಳಿತ ಪಕ್ಷಕ್ಕೆ ಹೋಗುತ್ತವೆ ಎಂದು ಹೇಳಿಕೆ ನೀಡಿದರು. ಇದೀಗ ಈ ವಿಷಯವನ್ನೇ ಇಟ್ಟಿಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಬಿಜೆಪಿಯ ಆಡಳಿತ ನೀತಿಯನ್ನು ಟೀಕಿಸಿದ್ದಾರೆ.
ಜತೆಗೆ ಹರಿಯಾಣದ ಅಸ್ಸಾಂಧ್ ಪ್ರದೇಶದ ಅಭ್ಯರ್ಥಿ ಬಕ್ಷೀಶ್ ಸಿಂಗ್ ವಿರಕ್ ನೀಡಿರುವ ಹೇಳಿಕೆಯ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿರುವ ರಾಹುಲ್ ಇವರು ಬಿಜೆಪಿಯ ಅತ್ಯಂತ ಪ್ರಮಾಣಿಕ ವ್ಯಕ್ತಿ ಎಂಬ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.
ಬಕ್ಷೀಶ್ ಸಿಂಗ್ ಅವರು ಈ ವಿಷಯದ ಕುರಿತು ಪ್ರತಿಕ್ರಿಯಿಸಿದ್ದು, ಆ ವೀಡಿಯೊ ತುಣುಕು ನಕಲಿಯಾಗಿದ್ದು, ನನ್ನನ್ನು ಮತ್ತು ನನ್ನ ಪಕ್ಷವನ್ನು ದೂಷಿಸುವ ಸಲುವಾಗಿ ನಮ್ಮ ವಿರೋಧಿಗಳು ಮಾಡಿದ ಪ್ರಯತ್ನ ಇದು ಎಂದು ಸಮರ್ಥನೆ ನೀಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚುನಾವಣಾ ಆಯೋಗ ವಿಕರ್ ವಿರುದ್ದ ನೋಟಿಸ್ ಜಾರಿಗೊಳಿಸಿದೆ.