ಹುಬ್ಬಳ್ಳಿ: ಹು-ಧಾ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯುವುದು ಸ್ಪಷ್ಟವಾಗಿದೆ. ಬಿಜೆಪಿಯವರ ನಾಟಕೀಯ ಅಭಿವೃದ್ಧಿಯಿಂದ ಜನರು ರೋಸಿ ಹೋಗಿದ್ದಾರೆ. ಮಹಾನಗರದ ಅಭಿವೃದ್ಧಿ ವೈಫಲ್ಯ ಈ ಬಾರಿಯ ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆ ಎಂದು ಮಾಜಿ ಸಚಿವ ಹಾಗೂ ಪಾಲಿಕೆ ಚುನಾವಣೆಯ ಪಕ್ಷದ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಅಭಿವೃದ್ಧಿ ಕೇವಲ ಜನರಿಗೆ ಕಣ್ಣಿಗೆ ರಂಜಿಸುವುದಾಗಿದೆ. ಆದರೆ ಜನರಿಗೆ ಬೇಕಾದ ಅಗತ್ಯ ಅಭಿವೃದ್ಧಿ ಇಲ್ಲಿ ಆಗಿಲ್ಲ. ಇಲ್ಲಿನ ವಸ್ತುಸ್ಥಿತಿ ಜನರಿಗೆ ಮನವರಿಕೆಯಾಗಿದ್ದು, ರೋಸಿ ಹೋಗಿದ್ದಾರೆ. ಎರಡು ಬಾರಿ ಇವರು ಅಧಿಕಾರದಲ್ಲಿದ್ದರೂ ಮಹಾನಗರಕ್ಕೆ ಇವರ ಕೊಡುಗೆ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳು ಜನರಿಗೆ ಅನುಕೂಲವಾಗುವ ಬದಲು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಸ್ಥಳೀಯ ಆಡಳಿತ ವೈಫಲ್ಯ, ಶೂನ್ಯ ಅಭಿವೃದ್ಧಿ ಈ ಚುನಾವಣೆಯ ಪ್ರಮುಖ ಅಂಶವಾಗಿದ್ದು, ಆದಷ್ಟು ಶೀಘ್ರದಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದರು.
ಶೀಘ್ರ ಪಟ್ಟಿ ಅಂತಿಮ: ಇಲ್ಲಿಯವರೆಗೆ ಸುಮಾರು 380ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನು 82ಕ್ಕೆ ಇಳಿಸುವುದು ಸವಾಲಿನ ಕಾರ್ಯವಾಗಿದೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದವರಿಗೆ ಆದ್ಯತೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ವಾರ್ಡ್‌ವಾರು ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಂಚೂಣಿ ಘಟಕ ಸೇರಿದಂತ ವಿವಿಧ ಸಮಾಜದ ಪ್ರಮುಖರು, ಪಕ್ಷದ ಮುಖಂಡರ ಅಭಿಪ್ರಾಯ ಪಡೆದುಕೊಂಡಿದ್ದೇವೆ. ಈ ಎಲ್ಲಾ ಅಂಶಗಳನ್ನು ಸೇರಿಸಿ ಆದಷ್ಟು ಶೀಘ್ರದಲ್ಲಿ ಅಂತಿಮ ಪಟ್ಟಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಎಐಎಂಐಎಂ ಸ್ಪರ್ಧೆಯಿಲ್ಲ: ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಥಳೀಯ ನಾಯಕರು ತಿಳಿಸಿದ್ದಾರೆ. ಒಂದು ವೇಳೆ ಸ್ಪರ್ಧೆ ಮಾಡಿದರೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಎಐಎಂಐಎಂ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಎದುರಾಳಿಗಳ ಚುನಾವಣೆ ಗಿಮಿಕ್ ಮಾತ್ರ. ಬಿಜೆಪಿಯಲ್ಲಿ ಸಾಕಷ್ಟು ಒಡಕು, ಗೊಂದಲಗಳಿದ್ದು, ಅಂತಹ ಪರಿಸ್ಥಿತಿ ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್ ಒಗ್ಗಟ್ಟಿನಿಂದ ಚುನಾವಣೆ ಮಾಡುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಮಿಷನ್-60 ಎಂದು ಬಿಂಬಿಸಿಕೊಳ್ಳುತ್ತಿದೆ. ವಾಸ್ತವದಲ್ಲಿ ಇದು ಅಸಾಧ್ಯವಾಗಿದೆ. ಆ ಪಕ್ಷದಲ್ಲಿ ಮುಖಂಡರು ಗುರುತಿಸುವ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿಯಲ್ಲಿ ಬೂತ್ ಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಿ ಎಲ್ಲರ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಧ್ರುವ ನಾರಾಯಣ, ಮಾಜಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಇನ್ನಿತರರಿದ್ದರು.