ಮೈಸೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ಆದರೆ, ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ರಾಜೀನಾಮೆ ನೀಡು. ಮುಂದಕ್ಕೆ ಈ ಬಗ್ಗೆ ನೋಡಿ ಕೊಳ್ಳೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಮೇಶ್ ಜಾರಕಿಹೊಳಿಗೆ ಹೇಳಿ ರಾಜೀನಾಮೆ ಪಡೆದಿದ್ದಾರೆ. ಮುಂದೆ ಅವರು ಆ ಯುವತಿಯ ಮನವೊಲಿಸಿ ಪ್ರಕರಣದ ದಿಕ್ಕನ್ನೇ ಬದಲಾ ಯಿಸುವ ಅಪಾಯ ಇದೆ. ಪ್ರಕರಣದ ಬಗ್ಗೆ ಕಟ್ಟುನಿಟ್ಟಾಗಿ ತನಿಖೆ ಯಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಸಿ.ಡಿ.ಗಳ ಸರ್ಕಾರವಾಗಿದೆ. ಈ ಪ್ರಕರಣ ಬಯಲಾದ ನಂತರ ಅವರು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ಆದರೆ, ಎಫ್ಐಆರ್ ದಾಖಲಾಗದಿರುವುದು ತಪ್ಪು. ಮೇಟಿಯವರು ಈ ರೀತಿ ಮಾಡಿದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವರ ಬಳಿ ಕೂಡಲೇ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸಿತ್ತು. ಅದೇ ರೀತಿ ಈಗಿನ ಸರ್ಕಾರವೂ ತನಿಖೆ ಕೈಗೊಂಡು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದರು.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯ ವರದಿಯೊಂದರ ಪ್ರಕಾರ ದೇಶದಲ್ಲಿ 1,700 ಶಾಸಕರು ಹಾಗೂ ಸಂಸದರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಈ ಪೈಕಿ 100 ಪ್ರಕರಣಗಳು ಲೈಂಗಿಕ ಕಿರುಕುಳದ್ದಾಗಿದ್ದು, ಅದರಲ್ಲಿ 70 ಪ್ರಕರಣಗಳು ಬಿಜೆಪಿಯ ಜನಪ್ರತಿನಿಧಿಗಳ ಮೇಲಿದೆ. ಆದ್ದರಿಂದ ಮುಂದೆ ಬಿಜೆಪಿಗೆ ಸೇರಲು ಇಚ್ಛಿಸುತ್ತಿರುವ ಮಹಿಳೆಯರಿದ್ದರೆ ಮತ್ತೂಮ್ಮೆ ಯೋಚಿಸಿ ಎಂದು ಹೇಳಿದರು.
ಒಕ್ಕಲಿಗರಿಗೆ ಮೀಸಲಾತಿ ಬೇಕಿಲ್ಲ ಎಂಬ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ. ಅವರು ತಮ್ಮ ಹೇಳಿಕೆಯನ್ನು ಈ ಕೂಡಲೆ ಹಿಂಪಡೆಯಬೇಕು. ಈಗಿರುವ ಮೀಸಲಾತಿ ಜಾರಿಗೆ ಬಂದು 50 ವರ್ಷಗಳಾಗಿವೆ. ಎಲ್ಲಾ ವರ್ಗಗಳಲ್ಲಿಯೂ ಕಡುಬಡವರಿದ್ದಾರೆ. ಆದ್ದರಿಂದ ಮೀಸಲಾತಿ ನೀತಿ ಪುನರ್ ನಿರ್ಮಾಣವಾಗಬೇಕು. ಎಲ್ಲರೂ ಸಮಾನರಾಗುವವರೆಗೂ ಮೀಸಲಾತಿ ಇರಲೇ ಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಚಂದ್ರು, ಗಿರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.