ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬೇಳೂರು ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡುವ ಮೂಲಕ ಆಗ್ರಹಿಸಿದೆ.
ಫೆಬ್ರುವರಿ 4ರಂದು ನಡೆದಿದ್ದ ಕಾಂಗ್ರೆಸ್ ಪ್ರತಿಭಟನೆ ವೇಳೆ ಬೇಳೂರು, ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿದ ಪ್ರಕರಣ ಉಲ್ಲೇಖಿಸಿ ಮಾತನಾಡುತ್ತ, ಮಹಾತ್ಮ ಗಾಂಧಿ ಇಂದು ಇದ್ದಿದ್ದರೆ ಅವರನ್ನೂ ಉಳಿಸುವುದಿಲ್ಲ ಎಂದು ಹೇಳುತ್ತಿದ್ದರಲ್ಲಾ..ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಸಿಲ್ಲ..ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೊಲ್ಲುತ್ತೀರಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಬೇಳೂರು ನೀಡಿರುವ ಖಾಸವಿ ಚಾನೆಲ್ ವೊಂದರಲ್ಲಿ ಪ್ರಸಾರವಾಗಿದ್ದ ಒಂದು ತಿಂಗಳ ಹಿಂದಿನ 29 ಸೆಕೆಂಡುಗಳ ವಿಡಿಯೋ ತುಣುಕನ್ನು ಬಿಜೆಪಿ ಟ್ವೀಟ್ ಮಾಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಭಾರತದ ವಾಯುಪಡೆ ಪಾಕ್ ನೆಲದಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಿದ್ದು, ಏತನ್ಮಧ್ಯೆ ಬೇಳೂರು ಗೋಪಾಲಕೃಷ್ಣ ಅವರು ಪ್ರಧಾನಿ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.