ಗಂಗಾವತಿ : ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯನ್ನು ಬಿಜೆಪಿ ಸಂಘಪರಿವಾರದವರು ಹೈಜಾಕ್ ಮಾಡಿ ಚುನಾವಣಾ ವಸ್ತುವಾಗಿ ಬಳಕೆ ಮಾಡಲು ಹವಣಿಸುತ್ತಿದ್ದು ಇದಕ್ಕೆ ತಾವು ಅವಕಾಶ ಕೊಡುವುದಿಲ್ಲ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ಅವರು ಕಾಂಗ್ರೆಸ್ ಸೇರ್ಪಡೆಯ ನಂತರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಆಪ್ತರು ಆಯೋಜಿಸಿದ್ದ ಬೈಕ್ ರ‍್ಯಾಲಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಜಾತಿ ಧರ್ಮದ ಆಧಾರದಲ್ಲಿ ನೆಲೆ ಕಂಡಿದೆ ಇದೀಗ ಕಿಷ್ಕಿಂದಾ ಅಂಜನಾದ್ರಿ ಮುನ್ನೆಲೆಗೆ ಬಂದಿದ್ದು ಇದರ ಲಾಭವನ್ನು ಬಿಜೆಪಿ ಸಂಘ ಪರಿವಾರದವರು ಪಡೆಯಲು ಪದೇ ಪದೇ ಅಂಜನಾದ್ರಿ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಅಂಜನಾದ್ರಿಗೆ ಎಲ್ಲಾ ಜಾತಿ ಪಕ್ಷದವರು ಭಕ್ತರಾಗಿದ್ದು ಬಿಜೆಪಿ ಸಂಘ ಪರಿವಾರದವರು ಮಾತ್ರ ಭಕ್ತರಾಗಿಲ್ಲ.
ಕಳೆದ ಹಲವು ತಿಂಗಳಿಂದ ಹೊಸಪೇಟೆ ರಾಜಕಾರಣದಿಂದಾಗಿ ಆನೆಗೊಂದಿ ಮತ್ತು ಸಾಣಾಪೂರ ಭಾಗದ ಗ್ರಾಮಗಳಲ್ಲಿದ್ದ ಸಣ್ಣಪುಟ್ಟ ವ್ಯಾಪಾರವನ್ನು ಸ್ಥಗಿತ ಮಾಡಲಾಗಿದೆ. ಸ್ಥಳೀಯ ಯುವಕರು ನಿರುದ್ಯೋಗಿಗಳಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಇದರಲ್ಲಿ ರಾಜಕೀಯ ಮಾಡುತ್ತಿಲ್ಲ. ಹೆಸರಿಗೆ ಮಾತ್ರ ಅಂಜನಾದ್ರಿ ಅಭಿವೃದ್ಧಿ ಎನ್ನುತ್ತ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ನೆಪದಲ್ಲಿ ಶೋಷಣೆ ಮಾಡಲಾಗುತ್ತಿದೆ. ಇನ್ನೂ ಮುಂದೆ ಇಂತಹ ದೌರ್ಜನ್ಯಗಳಿಗೆ ತಕ್ಕ ಉತ್ತರ ನೀಡಲಾಗುತ್ತದೆ.
ತಾವು ಡಿಕೆ ಶಿವಕುಮಾರ,ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ ಸೇರಿ ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರ ಸಾಮೂಹಿಕ ನಾಯಕ್ವದಲ್ಲಿ ನಂಬಿಕೆ ಇಟ್ಟು ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಗಂಗಾವತಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು ಪಕ್ಷ ಯಾರಿಗೆ ಟಿಕೇಟ್ ನೀಡಿದರೂ ಗೆಲುವಿಗಾಗಿ ಶ್ರಮಿಸಲಾಗುತ್ತದೆ. ತಾವು ಪಕ್ಷಕ್ಕೆ ಸೇರ್ಪಡೆಯಾಗುವ ಮುಂಚೆ ಬೆಂಗಳೂರಿನಲ್ಲಿ ಹಿರಿಯ ಸಮ್ಮುಖದಲ್ಲಿ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಶಿವರಾಜ್ ತಂಗಡಗಿ, ರಾಯರೆಡ್ಡಿ ಸೇರಿ ಇತರೆ ಮುಖಂಡ ಜತೆ ಹಿರಿಯರು ಮಾತುಕತೆ ನಡೆಸಿದ ಸಂದರ್ಭದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಅವರ ಆಪ್ತರು ಪಕ್ಷದ ಸಂಘಟನೆಗೆ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಎಂ.ಸರ್ವೇಶ್ ಮಲ್ಲಿಕಾರ್ಜುನನಾಗಪ್ಪ, ಎಚ್.ಎಸ್.ಭರತ್, ಬಿ.ಕೃಷ್ಣಪ್ಪ, ಜೋಗದ ಲಿಂಗಪ್ಪ, ಮಹಮದ್ ಉಸ್ಮಾನ್ ಬಿಚ್ಚಗತ್ತಿ, ಗೌಳಿ ರಮೇಶ, ಆರ್.ಪಿ.ರೆಡ್ಡಿ, ಶೋಭಾಸಿಂಗ್, ಆಯುಬ್ ಖಾನ್, ವೀರನಗೌಡ ಪರನಗೌಡ,ವೀರಭದ್ರ,ಶಿವು ಕಂಪ್ಲಿ ಸೇರಿ ಅನೇಕರಿದ್ದರು.