ಬೆಂಗಳೂರು: ನಾನು ಪಕ್ಷದ ಸಂಘಟನಾ ಕಾರ್ಯದರ್ಶಿ ಸ್ಥಾನದಿಂದ ಕೆಲಸ ಮಾಡಿದ್ದೇನೆ. ವಿಧಾನ ಪರಿಷತ್ ಉಪ ನಾಯಕನ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ನಾನು ಆ ಹುದ್ದೆ ಬೇಡ ಅಂತ ಹೆಳಿದ್ದೇನೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಚ್ ಎಂ ರೇವಣ್ಣ ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಕಾರ್ಯಾಧ್ಯಕ್ಷ ಸ್ಥಾನ ಬೇಡುವುದು ಸಮಂಜಸವಲ್ಲ. ಪಕ್ಷದಲ್ಲಿ ಬೇರೆ ಯಾವುದೇ ಜವಾಬ್ದಾರಿ ನೀಡಿದರೂ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.
ಚುನಾವಣೆ ಪೂರ್ವದಲ್ಲಿಯೇ ಬಿಜೆಪಿ – ಜೆಡಿಎಸ್ ಒಳ ಒಪ್ಪಂದ ಮಾಡಿ ಕೊಂಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಅವರು ಬಿಜೆಪಿ ಜೊತೆ ಹೋದರೆ ಏನು ಮಾಡಲು ಆಗುವುದಿಲ್ಲ. ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಹೇಳಿಕೆ ನೀಡಿದರು.
ರಾಜಕೀಯ ಧ್ರುವೀಕರಣ ಆಗಾಗ ಆಗುತ್ತಲೇ ಇರುತ್ತದೆ. ಸಿದ್ದರಾಮಯ್ಯ ನಾಯಕರು ಆದಾಗ ಅಹಿಂದ ವಿಷಯ ಮುಂದೆ ಬರುತ್ತದೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದ ಪರ ಕೆಲಸ ಮಾಡುತ್ತಿದೆ. ಇಂದಿರಾಗಾಂಧಿ, ದೇವರಾಜ್ ಅರಸು ಅವರ ಕಾಲದಿಂದಲೂ ಕಾಂಗ್ರೆಸ್ ಎಲ್ಲ ವರ್ಗದ ಪರವಾಗಿ ಕೆಲಸ ಮಾಡಿದ್ದಾರೆ. ಈಗ ಎಲ್ಲಾ ರಾಜಕೀಯ ನಾಯಕರಿಗೆ ಸಿದ್ದರಾಮಯ್ಯ ಅವರೇ ಕಾಣಿಸುತ್ತಿದ್ದಾರೆ. ಅವರನ್ನೇ ಕೇಂದ್ರಿಕೃತವಾಗಿ ಮಾತನಾಡುತ್ತಿರುವುದು ಅವರ ಶಕ್ತಿಯನ್ನು ಬಲಗೊಳಿಸುತ್ತದೆ ಎಂದರು.
ನಾನು 70ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ನನ್ನ ಅಭಿನಂದನಾ ಗ್ರಂಥ ಬಿಡುಗಡೆಗೆ ತೀರ್ಮಾನ ಮಾಡಿದ್ದೇವೆ. ಡಿಸೆಂಬರ್ ನಲ್ಲಿ ಪುಸ್ತಕರೂಪದಲ್ಲಿ ತರಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.