ಗದಗ: ದೇಶದಲ್ಲಿ 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ಇಲಾಖೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿ ರಾಷ್ಟ್ರದ ಆಸ್ತಿಯನ್ನಾಗಿಸಿತ್ತು. ಆದರೆ, ಕಾಂಗ್ರೆಸ್ ಕೊಡುಗೆಯನ್ನು ಪ್ರಶ್ನಿಸುವ ಪ್ರಧಾನಿ ಮೋದಿ ಸರಕಾರ ರಾಷ್ಟ್ರೀಯ ಆಸ್ತಿಗಳನ್ನು ಮಾರಾಟಕ್ಕಿಟ್ಟಿದ್ದೇ ಅವರ ಸಾಧನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ಎಚ್.ಕೆ.ಪಾಟೀಲ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಯುಪಿಎ-2 ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಕಾಂಗ್ರೆಸ್ ಸಾಧನೆಯನ್ನು ಪ್ರಶ್ನಿಸುತ್ತಿದ್ದರು. ಮಾತು ಮಾತಿಗೆ 70 ವರ್ಷ ಏನು ಮಾಡಿದರೆಂದು ಟೀಕಿಸುತ್ತಿದ್ದರು. ಆದರೀಗ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕೇಂದ್ರ ಸರಕಾರ ಮಾರಾಟಕ್ಕಿಟ್ಟಿರುವ ಕ್ರೀಡಾಂಗಣಗಳು, ರೈಲ್ವೆ ನಿಲ್ದಾಣ, ರೈಲ್ವೆ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಎಲ್ಲವೂ ಕಾಂಗ್ರೆಸ್ ಅವಧಿಯ 70 ವರ್ಷಗಳಲ್ಲಿ ಅಭಿವೃದ್ಧಿಗೊಂಡಿವೆ ಎಂದು ತಿರುಗೇಟು ನೀಡಿದರು.
ಈಸ್ಟ್ ಇಂಡಿಯಾ ಕಂಪನಿ ಮಾದರಿಯಲ್ಲಿರುವ “ಹಮ್ ದೋ, ಹಮಾರೆ ದೋ’ ಎಂಬ ಮಾತಿನಂತೆ ದೇಶದ ಎಲ್ಲ ಸಂಪತ್ತು, ಆಸ್ತಿಗಳು ಅದಾನಿ-ಅಂಬಾನಿ ಅವರ ಪಾಲಾಗುತ್ತಿವೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗೀಕರಣಗೊಳ್ಳುವುದರಿಂದ ಉದ್ಯೋಗ ಸೃಷ್ಟಿ ಕಡಿಮೆಯಾಗಿ, ನಿರುದ್ಯೋಗ ಸಮಸ್ಯೆ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಕ್ಷಣ ಖರೀದಿ ಕೇಂದ್ರ ಆರಂಭಿಸಿ: ಈ ಬಾರಿ ಉತ್ತಮ ಮಳೆಯಿಂದಾಗಿ ಈ ಭಾಗದಲ್ಲಿ ಹೆಸರು ಇಳುವರಿ ಹೆಚ್ಚಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ರೈತರಿಗೆ ನಿರೀಕ್ಷಿತ ಬೆಲೆ ದೊರೆಯುತ್ತಿಲ್ಲ. ಸರಕಾರ ಕನಿಷ್ಟ ಬೆಂಬಲ ಬೆಲೆ ಘೋಷಿಸಿದರೂ ಮಾರುಕಟ್ಟೆಯಲ್ಲಿ ಬೆಲೆ ಪುಟಿದೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಆಗ್ರಹಿಸಿದರು.
ಕೇವಲ ಗದಗ ಎಪಿಎಂಸಿ ಒಂದಕ್ಕೆ ಕಳೆದ 24ರಂದು 16,010 ಕ್ವಿಂಟಲ್, 13 ರಂದು 80035 ಕ್ವಿಂಟಲ್ ಆವಕವಾಗಿದೆ. ಅದರಂತೆ ಪ್ರತಿನಿತ್ಯ ಸಾವಿರಾರು ಕ್ವಿಂಟಲ್ ಹೆಸರು ಮಾರುಕಟ್ಟೆಗೆ ಬರುತ್ತಿದೆ. ಆದರೆ ಸರಕಾರ ನಿಗದಿಪಡಿಸಿದ ಕನಿಷ್ಟ ಬೆಲೆಗಿಂತ ಕಡಿಮೆ ಬೆಲೆ ದೊರೆಯುತ್ತಿದೆ ಎಂದು ದೂರಿದರು.
ತಾಲೂಕಿನ ಹೊಂಬಳದಲ್ಲಿ ಎರಡು ಖರೀದಿ ಕೇಂದ್ರಗಳನ್ನು ಗುರುತಿಸಿರುವ ಜಿಲ್ಲಾಡಳಿತ ಕುರ್ತಕೋಟಿ, ಹೊಸಳ್ಳಿ, ಚಿಂಚಲಿ ಭಾಗವನ್ನು ಕಡೆಗಣಿಸಿದೆ. ಇದು ಸರಿಯಲ್ಲ. ತಕ್ಷಣವೇ ಈ ಭಾಗದಲ್ಲೂ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಪ್ರತಿ ಎಕರೆಗೆ 4 ಕ್ವಿಂಟಲ್‌ಗೆ ಮಿತಿಗೊಳಿಸಿರುವುದನ್ನು ಕನಿಷ್ಟ 6 ಕ್ವಿಂಟಲ್ ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಪ್ರಮುಖರಾದ ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.