ಗದಗ: ಉದ್ಯಮಿ ಅದಾನಿ ಅವರಿಗೆ ಮೊಮ್ಮಗ ಜನಿಸುತ್ತಿದ್ದಂತೆ ಮನೆಗೆ ತೆರಳಿ ಶುಭ ಕೋರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿಯಲ್ಲಿ ಕೊರೆಯುವ ಚಳಿ ಲೆಕ್ಕಿಸದೇ ಹೋರಾಟ ನಡೆಸುತ್ತಿರುವ ಅನ್ನದಾತನ ಅಳಲು ಆಲಿಸಲು ಸಮಯವಿಲ್ಲ. “ಹಮ್ ದೋ, ಹಮಾರೆ ದೋ’ ಎಂಬ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರಕ್ಕೆ ರೈತರು, ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ಹರಿಹಾಯ್ದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ-ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು, ಎಪಿಎಂಸಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಮ್ ದೋ, ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಅವರು “ಹಮಾರೇ ದೋ’ ಎಂಬಂತಾಗಿದೆ. ಈ ಮೂರೂ ಕಾಯ್ದೆಗಳು ಸಂಪೂರ್ಣ ಕಾರ್ಪೊರೇಟ್ ಪರವಾಗಿವೆ ಎಂದು ಆರೋಪಿಸಿದರು.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ದೇಶದಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 100 ರೂ., ಡೀಸೆಲ್ 80 ರೂ. ತಲುಪಿದೆ. ಇದರಿಂದ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲಿವೆ. ಈ ಬಗ್ಗೆ ಪ್ರಶ್ನಿಸಿದರೆ, ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಬೈಕ್, ಟಿ.ವಿ, μÅಡ್ಜ್ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಧ್ವನಿ ಗೂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದೊಡ್ಡವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕು ಎನ್ನುತ್ತಾರೆ. ದೊಡ್ಡವರು ಎಂದರೆ, ಯಾರು? ನಿಮ್ಮ ಸರ್ಕಾರ ಶ್ರೀಮಂತರಿಗೂ ಬಿಪಿಎಲ್ ಕಾರ್ಡ್ ಕೊಟ್ಟಿದೆಯೇ ಎಂದು ಗುಡುಗಿದ ಅವರು, ಬಡವರ ಮೇಲೆ ಗದಾ ಪ್ರಹಾರ ಮಾಡಬಾರದು. ಬಡವರ ಆಹಾರ ಹಕ್ಕು ಕಿತ್ತುಕೊಳ್ಳಬಾರದೆಂದು ಆಗ್ರಹಿಸಿದರು. ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷದಿಂದ ಫೆ.20ರಿಂದ 23ರವರೆಗೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಟ್ರ್ಯಾಕ್ಟರ್, ಬೈಕ್ ರ್ಯಾಲಿ ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ಮೋದಿ ಸರ್ಕಾರ ಕಳೆದ 6 ವರ್ಷಗಳಿಂದ ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸಲಿದೆ ಎಂಬ ಎಪಿಎಂಸಿ ಕಾಯ್ದೆ, ಮೂರು ಕೃಷಿ ಕಾಯ್ದೆಗಳಲ್ಲಿ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೂಚಿಸಿಲ್ಲ. ರೈತರ ಆದಾಯ ಹೇಗೆ ದ್ವಿಗುಣ ಗೊಳ್ಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆಹಾರ ಧಾನ್ಯಗಳ ದಾಸ್ತಾನು ಮಿತಿ ರದ್ದುಗೊಳಿಸುವ ಮೂಲಕ ಕೃತಕ ಅಭಾವಕ್ಕೆ ದಾರಿ ಮಾಡಿಕೊಟ್ಟಿದೆ. ಈ ಕಾಯ್ದೆಗಳು ರೈತರ ಆದಾಯ ಶೂನ್ಯಕ್ಕೆ ದೂಡಲಿವೆ. ರೈತರು- ಬಡ ಕುಟುಂಬಗಳ ಅರ್ಥ ವ್ಯವಸ್ಥೆ ಹಾಳು ಮಾಡಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ ಇತರರು ಇದ್ದರು.