ನವದೆಹಲಿ: 5,600 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಮಾಫಿಯಾದ ಕಿಂಗ್ ಪಿನ್ ಬಂಧಿತ ಆರೋಪಿ ದೆಹಲಿ ಯುವ ಕಾಂಗ್ರೆಸ್ ನ ಆರ್ ಟಿಐ ಸೆಲ್ ನ ಅಧ್ಯಕ್ಷ ಎಂಬುದಾಗಿ ಭಾರತೀಯ ಜನತಾ ಪಕ್ಷ ಗಂಭೀರವಾಗಿ ಆರೋಪಿಸಿದೆ.
ಡ್ರಗ್ಸ್ ಡೀಲರ್ಸ್ ಗಳ ಜೊತೆ ಶಾಮೀಲಾಗುವ ಮೂಲಕ ಕಾಂಗ್ರೆಸ್ ಪಕ್ಷ ದೇಶವನ್ನು ನಾಶಗೊಳಿಸಲು ಹೊರಟಿದೆ ಎಂದು ಬಿಜೆಪಿ ವಕ್ತಾರ, ಸಂಸದ ಸುಧಾಂಶು ತ್ರಿವೇದಿ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದು, ವಿಪಕ್ಷ ಕಾಂಗ್ರೆಸ್ ಈ ಬಗ್ಗೆ ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಡ್ರಗ್ಸ್ ಮಾಫಿಯಾ ಹಣವನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆಯೇ ಎಂದು ತ್ರಿವೇದಿ ಪ್ರಶ್ನಿಸಿದ್ದು, ಅದೇ ರೀತಿ ಆರೋಪಿ ಕಿಂಗ್ ಪಿನ್ ತುಷಾರ್ ಗೋಯಲ್ ಜತೆ ಕಾಂಗ್ರೆಸ್ ಪಕ್ಷ ಯಾವ ರೀತಿಯ ಸಂಬಂಧ ಹಾಗೂ ವ್ಯವಹಾರ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಹರ್ಯಾಣದಲ್ಲಿ ಮುಕ್ತ ಅವಕಾಶ ನೀಡುವ ಬಗ್ಗೆ ಡ್ರಗ್ ಡೀಲರ್ಸ್ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದ ನಡೆದಿರಬಹುದು ಎಂದು ತ್ರಿವೇದಿ ಆರೋಪಿಸಿದರು.
ಆರೋಪ ಅಲ್ಲಗಳೆದ ಕಾಂಗ್ರೆಸ್:
ಡ್ರಗ್ ಮಾಫಿಯಾದಲ್ಲಿ ಬಂಧಿತನಾಗಿರುವ ತುಷಾರ್ ಗೋಯಲ್ ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ. 2022ರಲ್ಲಿಯೇ ತುಷಾರ್ ಗೋಯಲ್ ನನ್ನು ದೆಹಲಿ ಯುವ ಕಾಂಗ್ರೆಸ್ ಆರ್ ಟಿಐ ಸೆಲ್ ನ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.