ಹೊಸದಿಲ್ಲಿ: ಮುಂದಿನ ತಿಂಗಳ 7ರಿಂದ ಶುರುವಾಗಲಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಲಾಂಛನ, ಟ್ಯಾಗ್‌ಲೈನ್ ಮತ್ತು ವೆಬ್‌ಸೈಟ್ ಬಿಡುಗಡೆಯಾಗಿದೆ. ರಾಜ್ಯಸಭಾ ಸದಸ್ಯ ಜೈರಾಮ್ ಅವರು ಮಂಗಳವಾರ ಹೊಸದಿಲ್ಲಿಯಲ್ಲಿ ಅದನ್ನು ಮಾಡಿದ್ದಾರೆ.
“ಸೆ.7ರಂದು ತಮಿಳುನಾಡಿನ ಕನ್ಯಾ ಕುಮಾರಿಯಲ್ಲಿ ಆರಂಭವಾಗುವ ಯಾತ್ರೆ ಒಟ್ಟು ಐದು ತಿಂಗಳ ಕಾಲ ಸಾಗಲಿದ್ದು, ಕಾಶ್ಮೀರದಲ್ಲಿ ಕೊನೆಗಾಣಲಿದೆ. ಪ್ರತಿ ರಾಜ್ಯ ಗಳಲ್ಲೂ ಚಿಕ್ಕ ಚಿಕ್ಕ ಭಾರತ್ ಜೋಡೋ ಯಾತ್ರೆ ನಡೆಯುತ್ತದೆ. ಕನಿಷ್ಠ 100 ಪಾದಯಾತ್ರಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಟ್ಟು 3,570 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ. ಅವರನ್ನು ಭಾರತ್ ಯಾತ್ರಿ ಎಂದು ಕರೆಯಲಾಗುವುದು. ಸಂಸದ ರಾಹುಲ್ ಗಾಂಧಿ ಕೂಡ ಭಾರತ್ ಯಾತ್ರಿ ಆಗಿರಲಿದ್ದಾರೆ’ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಅತಿಥಿ ಯಾತ್ರಿ: ಯಾತ್ರೆಯು ಹಾದು ಹೋಗದ ರಾಜ್ಯಗಳಿಂದಲೂ ಕನಿಷ್ಠ 100 ಮಂದಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ ಜೈರಾಮ್, ಅವರನ್ನು ಅತಿಥಿ ಯಾತ್ರಿ ಎಂದು ಹೆಸರಿಸಲಾಗುವುದು. ಯಾತ್ರೆ ಹಾದು ಹೋಗುವ ರಾಜ್ಯಗಳಲ್ಲಿ 100 ಪಾದ ಯಾತ್ರಿಗಳು ಯಾತ್ರೆಗೆ ಸೇರಿಕೊಳ್ಳ ಲಿದ್ದು, ಅವರನ್ನು ಪ್ರದೇಶ್ ಯಾತ್ರಿ ಎಂದು ಕರೆಯಲಾಗುವುದು. ಒಟ್ಟಿನಲ್ಲಿ ಸದಾ ಕಾಲ ಯಾತ್ರೆಯಲ್ಲಿ ಕನಿಷ್ಠ 300 ಮಂದಿ ಇರುತ್ತಾರೆ ಎಂದರು.
ವೆಬ್‌ಸೈಟ್‌ನಲ್ಲಿ ಹೆಸರು: ಯಾತ್ರೆಯಲ್ಲಿ ಭಾಗವಹಿಸಲು ಬಯಸುವವರಿಗೆ ಇದಕ್ಕೆಂದೇ ಮಾಡಲಾಗಿರುವ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಟ್ಯಾಗ್‌ಲೈನ್: ಈ ಯಾತ್ರೆಗೆ “ಮಿಲೆ ಕದಮ್, ಜುಡೆ ವತನ್’ ಎನ್ನುವ ಟ್ಯಾಗ್‌ಲೈನ್ ಅನ್ನೂ ಕೊಡಲಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್‌ನ ಅನೇಕ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ಯಾಗ್‌ಲೈನ್ ಹಾಗೂ ಲಾಂಛನವನ್ನು ಹಂಚಿಕೊಳ್ಳ ಲಾರಂಭಿಸಿದ್ದಾರೆ.
ಹೇಗಿದೆ ಹಾದಿ?
ಕನ್ಯಾಕುಮಾರಿ ಇಂದ ಆರಂಭವಾಗುವ ಯಾತ್ರೆಯು ತಿರುವನಂತಪುರಂ, ಕೊಚ್ಚಿ, ನೀಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಂದೇದ್, ಜಲಗಾಂವ್ ಜಮೋದ್, ಇಂದೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಟಾಣ್‌ಕೋಟ್, ಜಮ್ಮು ಮಾರ್ಗದಲ್ಲಿ ಶ್ರೀನಗರ ತಲುಪಲಿದೆ.