Advertisement

ಕಾಂಗ್ರೆಸ್‌ ಹಳಿ ತಪ್ಪಿದ ತುಕಡೆ ಗ್ಯಾಂಗ್‌: ಕಟೀಲ್‌

06:39 PM Oct 28, 2021 | Team Udayavani |

ಬಾಗಲಕೋಟೆ: ಕಾಂಗ್ರೆಸ್‌ ಇಂದು ಹಳಿ ತಪ್ಪಿದ ತುಕಡೆ ಗ್ಯಾಂಗ್‌ ಆಗಿದೆ. ಗಾಂಧಿ ಕಟ್ಟಿದ ಕಾಂಗ್ರೆಸ್‌ ಇಂದು ಸಂಪೂರ್ಣ ಹಳಿ ತಪ್ಪಿ ಹೋಗಿದೆ. ವೈಚಾರಿಕ ಬೌದ್ಧಿಕ ವಿಚಾರದಿಂದ ಹೊರಬಂದು, ಸಣ್ಣ ಮಟ್ಟದ ನೀಚ ರಾಜಕಾರಣಕ್ಕೆ ಕಾಂಗ್ರೆಸ್‌ ಇಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಆರೋಪಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರ ಜಾತಿ ಮತ್ತು ಸಣ್ಣತನದ ರಾಜಕಾರಣದಿಂದ ಜನತೆ ಇಂದು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕಾರ ಮಾಡುವ ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್‌ಗೆ ಜಾತಿ ರಾಜಕಾರಣ ಬಿಟ್ರೆ ಉಪ ಚುನಾವಣೆಯಲ್ಲಿ ಬೇರೆ ಅಸ್ತ್ರವೇ ಇಲ್ಲ. ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ, ವೈಚಾರಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಅಧ್ಯಕ್ಷರ ನೇಮಕವಾಗಿಲ್ಲ. ಕಾಂಗ್ರೆಸ್‌ಗೆ ಒಂದು ಪೂರ್ಣ ಸಮಿತಿ ರಚನೆ ಮಾಡಲೂ ಆಗಿಲ್ಲ. ಇಂತಹ ಕಾಂಗ್ರೆಸ್‌ಗೆ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಲು ಆಗಲ್ಲ. ಆಡಳಿತಕ್ಕೆ ಅವರು ಸಮರ್ಥರೂ ಅಲ್ಲ ಎನ್ನೋದು ಸ್ಪಷ್ಟವಾಗಿದೆ ಎಂದರು.

ಸಿಂದಗಿ, ಹಾನಗಲ್‌ ಎರಡೂ ಉಪಚುನಾ ವಣೆಯಲ್ಲಿ ಬಿಜೆಪಿಯ ಅಭಿವೃದ್ಧಿಪರ, ಜನಪರ ಹಾಗೂ ರಾಷ್ಟ್ರ ಪರವಾದ ವಿಚಾರಗಳಿಗೆ ಜನರು ಮನ್ನಣೆ ನೀಡುತ್ತಾರೆ. ಉಪ ಚುನಾವಣೆಯಲ್ಲಿ ಜೆಡಿಎಸ್‌ ಕುಟುಂಬ ಪ್ರಚಾರ ನಡೆಸುತ್ತಿದೆ. ರಾಜಕಾರಣದಲ್ಲಿ ಕುಟುಂಬ ಪ್ರಚಾರ ಮಾಡುವ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ರಾಜಕಾರಣದಲ್ಲಿ ಎಲ್ಲರೂ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಜೆಡಿಎಸ್‌ ಕುಟುಂಬ ಸಮೇತ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಜಾತಿ ರಾಜಕಾರಣ: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಸಹಿತ ಎಲ್ಲರೂ ಕಂಬಳಿ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಉತ್ತಮ ಚರ್ಚೆ ಆಗಬೇಕು. ಯಾರದ್ದೇ ತಪ್ಪು ಇದ್ದರೂ ತಪ್ಪೇ. ನಮ್ಮದಿದ್ದರೂ ಹೇಳಿ, ಒಪ್ಪುತ್ತೇವೆ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು. ಆರಂಭದಲ್ಲಿ ಆರ್‌ಎಸ್‌ಎಸ್‌ ಬೈಯ್ದರು. ನಂತರ ವೈಯಕ್ತಿಕ ನಿಂದನೆ ಮಾಡಿದರು. ಈಗ ಅದನ್ನೆಲ್ಲ ಬಿಟ್ಟು ಜಾತಿ ರಾಜಕಾರಣ ಮಾಡ್ತಿದ್ದಾರೆ. ಇದೆನ್ನೆಲ್ಲ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಮಾಡುತ್ತಿದ್ದಾರೆ. ಬಿಜೆಪಿ ಎಂದಿಗೂ ಜಾತಿ ರಾಜಕಾರಣ ಮಾಡಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಜಾತಿ ರಾಜಕಾರಣ ಮಾಡಿದ್ದಕ್ಕೆ ನಾವು ಉತ್ತರ ಕೊಟ್ಟಿದ್ದೇವೆ. ಈ ಉಪಚುನಾವಣೆಯಲ್ಲಿ ಅಭಿವೃದ್ಧಿ ಮತ್ತು ಯೋಜನೆಗಳ ಮೂಲಕ ಎದುರಿಸುತ್ತಿದ್ದೇವೆ. 60 ವರ್ಷ ಸುದೀರ್ಘ‌ ಆಡಳಿತ ಮಾಡಿ, ಜನರಿಗೆ ಏನು ಕೊಟ್ಟಿದ್ದೇವೆ ಎಂದು ಹೇಳುವ ಯೋಗ್ಯತೆ ಕಾಂಗ್ರೆಸ್‌ನವರಿಗೆ ಇಲ್ಲ. ಚುನಾವಣೆಯ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

ಡಿಕೆಶಿಗೆ ಸಿಎಂ ಆಗಲು ಸಿದ್ದು ಬಿಡಲ್ಲ:
ಯಡಿಯೂರಪ್ಪ ಹಾಕಿದ ಕಣ್ಣೀರಲ್ಲಿ ಬಿಜೆಪಿ ಕೊಚ್ಚಿಕೊಂಡು ಹೋಗುತ್ತದೆ ಎಂದು ಡಿ.ಕೆ. ಶಿವಕುಮಾರ ಟೀಕಿಸಿದ್ದಾರೆ. ದೇಶದಲ್ಲಿ ಅತಿಹೆಚ್ಚು ಆಡಳಿತ ಮಾಡಿದ್ದು ಕಾಂಗ್ರೆಸ್‌. ಈ 60 ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಏನು ಕೊಟ್ಟಿದ್ದೇವೆ ಎಂದು ಹೇಳಲಿ. ಇದೀಗ ಕಟ್ಟು ಕಥೆ ಶುರು ಮಾಡಿದ್ದಾರೆ. ನಮ್ಮನ್ನು ಸಿಎಂ ಮಾಡಲಿಲ್ಲ ಎಂದು ಖರ್ಗೆ, ಪರಮೇಶ್ವರ ಅವರ ಕಣ್ಣೀರು ಜಾಸ್ತಿ ಇದೆ. ಖರ್ಗೆ ಮತ್ತು ಪರಮೇಶ್ವರ ಅವರ ಕಣ್ಣೀರಿನಲ್ಲಿ ಕಾಂಗ್ರೆಸ್‌ ಸರ್ವನಾಶವಾಗಿ ಹೋಗುತ್ತದೆ. ಇದಕ್ಕೆ ಡಿ.ಕೆ. ಶಿವಕುಮಾರ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ ಅವರಿಗೆ ಖರ್ಗೆ, ಪರಮೇಶ್ವರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಚಿಂತೆ ಇದೆ. ಸೀಟ್‌ಗೆ ಟವಲ್‌ ಹಾಕಿಕೊಂಡು ಕುಳಿತ ಶಿವಕುಮಾರ ಮತ್ತು ಸಿದ್ದರಾಮಯ್ಯ ಮಧ್ಯೆ ಹೋರಾಟ ಶುರುವಾಗಿದೆ. ಈ ಉಪ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ ಎರಡು ಹೋಳಾಗುತ್ತದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಲು ಡಿ.ಕೆ. ಶಿವಕುಮಾರ ಬಿಡಲ್ಲ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಲ್ಲಿ ಡಿಕೆಶಿ ಅವರನ್ನು ಮುಂದುವರಿಯಲು ಸಿದ್ದರಾಮಯ್ಯ ಬಿಡಲ್ಲ ಎಂದು ಟೀಕಿಸಿದರು.

ಸಮಾಜವಾದಿ ಹೆಸರಿನಲ್ಲಿ ಸಿದ್ದು ಮಜಾ:
ಸಿದ್ದರಾಮಯ್ಯ ಒಬ್ಬ ಮುತ್ಸದ್ಧಿ. ಸಿಎಂ ಆದವರು. ಈಗ ವಕೀಲ ಎಂದು ಹೇಳಿಕೊಂಡು ತಿರುಗಾಡುವವರು. ಸಮಾಜವಾದಿ ಹೆಸರಿನಲ್ಲಿ ಮಜಾ ಮಾಡಿದವರು. ಇವರ ಬಗ್ಗೆ ಹೇಳುವ ಯೋಗ್ಯತೆ ನನಗಿಲ್ಲ. ನಾನು ವೈಯಕ್ತಿಕವಾಗಿ ಹೇಳ್ಳೋದಿಲ್ಲ. ಈಗಲಾದರೂ ಕಾಂಗ್ರೆಸ್‌ ಎಚ್ಚೆತ್ತುಕೊಳ್ಳಬೇಕು. ಯಾವ ವಿಷಯದ ಮೇಲೆ ಚುನಾವಣೆಗೆ ಹೋಗಬೇಕು ಎಂಬ ವಿಚಾರ ಮಾಡಬೇಕು. ಕಾಂಗ್ರೆಸ್‌ ದಿವಾಳಿಯಾಗಿದೆ. ಚಿಲ್ಲರೆ ರಾಜಕಾರಣದಲ್ಲಿ ಬದುಕಿದ್ದಾರೆ ಎಂದು ಜನ ನಿಶ್ಚಯ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ನ ಬಿ ಟೀಂ ಜೆಡಿಎಸ್‌: ಜೆಡಿಎಸ್‌ ಪಕ್ಷ, ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ವಾಸ್ತವದಲ್ಲಿ ಕಾಂಗ್ರೆಸ್‌ನ ಬಿ, ಟೀಂ ಜೆಡಿಎಸ್‌. ಎರಡು ಬಾರಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಇದೇ ಕಾಂಗ್ರೆಸ್‌ ನವರು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು, ದೇವೇಗೌಡರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಪ್ರಧಾನಿ ಮಾಡಿದ್ದು ಯಾರು, ಮೈಸೂರು ನಗರಸಭೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಕಾಂಗ್ರೆಸ್‌. ಹೀಗಾಗಿ ಕಾಂಗ್ರೆಸ್‌ನ ಬಿ ಟೀಂ, ಜೆಡಿಎಸ್‌. ಸಿದ್ದರಾಮಯ್ಯ ಕೂಡ ಜೆಡಿಎಸ್‌ನಿಂದ ಬಂದವರು.

ಅವರು ಮೂಲ ನಾಯಕನಾಗಿದ್ದೇ ಜೆಡಿಎಸ್‌ನಲ್ಲಿ. ಅವರು ಎಲ್ಲಿ ನಾಯಕರಾಗಿ ಬೆಳೆಯುತ್ತಾರೋ, ಅದನ್ನೇ ತುಳಿಯುತ್ತಾರೆ. ಇದು ಸಿದ್ದು ಹಣೆಬರಹ ಎಂದು ಟೀಕಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಹಿರಿಯ ಮುಖಂಡ ಯಲ್ಲಪ್ಪ ಬೆಂಡಿಗೇರಿ ಉಪಸ್ಥಿತರಿದ್ದರು.

ಡಿ.ಕೆ. ಶಿವಕುಮಾರ ಅವರಿಗೆ ಖರ್ಗೆ, ಪರಮೇಶ್ವರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಚಿಂತೆ ಇದೆ. ಸೀಟ್‌ಗೆ ಟವಲ್‌ ಹಾಕಿಕೊಂಡು ಕುಳಿತ ಶಿವಕುಮಾರ ಮತ್ತು ಸಿದ್ದರಾಮಯ್ಯ ಮಧ್ಯೆ ಹೋರಾ ಟ ಶುರುವಾಗಿದೆ. ಈ ಉಪ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ ಎರಡು ಹೋಳಾಗುತ್ತದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಲು ಡಿ.ಕೆ. ಶಿವಕುಮಾರ ಬಿಡಲ್ಲ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಲ್ಲಿ ಡಿಕೆಶಿ ಅವರನ್ನು ಮುಂದುವರಿಯಲು
ಸಿದ್ದರಾಮಯ್ಯ ಬಿಡಲ್ಲ.
ನಳಿನಕುಮಾರ ಕಟೀಲ್‌,
ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next