Advertisement

ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ: ಈಶ್ವರ್‌ ಖಂಡ್ರೆ

04:25 AM Apr 13, 2019 | Team Udayavani |

ಬೆಂಗಳೂರು: ಹಾಲಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆಯವರು “ಉದಯವಾಣಿ’ ಜೊತೆ ನಡೆಸಿದ ಸಂದರ್ಶನ.

Advertisement

* ಶಾಸಕರಾಗಿಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾಕೆ ಬಯಸಿದ್ದೀರಾ?
ಒಂದು ಪಕ್ಷದ ಸಿದ್ದಾಂತ ಒಪ್ಪಿ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿ, ಮಂತ್ರಿಯಾಗಿ, ಈಗ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರದಲ್ಲಿ ನನ್ನ ಅವಶ್ಯಕತೆ ಇದೆ ಎಂದು ಪಕ್ಷದ ಹೈಕಮಾಂಡ್‌ ಸೂಚನೆ ನೀಡಿದೆ. ಅವರ ಆದೇಶ ಪಾಲಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.

* ಹಾಲಿ ಶಾಸಕರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರಲ್ಲಾ?
ಹಾಗೇನಿಲ್ಲ. ಯಾವುದೇ ಮಾನದಂಡಗಳನ್ನು ಹಾಕಿಕೊಂಡಿರಲಿಲ್ಲ. ಅವಶ್ಯಕತೆಗಳಿಗೆ ಅನುಗುಣವಾಗಿ, ಕ್ಷೇತ್ರಗಳ ಜನ ಹಾಗೂ ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.

* ರಾಜ್ಯದಲ್ಲಿ ಮೈತ್ರಿಯಿಂದ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳುತ್ತಿದೆ ಎಂಬ ಆರೋಪವಿದೆಯಲ್ಲಾ?
ಉತ್ತರ ಕರ್ನಾಟಕದಲ್ಲಿ ಯಾವುದೇ ಸಮಸ್ಯೆಯಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರು ತಳಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಮೇಲ್ಮಟ್ಟದಲ್ಲಿ ನಾಯಕರ ನಡುವೆ ಹೊಂದಾಣಿಕೆಯಾಗಿದ್ದರೂ, ಕಾರ್ಯಕರ್ತರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇತ್ತು. ನಾಯಕರೆಲ್ಲಾ ಸೇರಿ ಅದನ್ನು ಹೋಗಲಾಡಿಸಿದ್ದಾರೆ. ಶೇ.99ರಷ್ಟು ಕಾರ್ಯಕರ್ತರು ಮೈತ್ರಿ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.

* ಜೆಡಿಎಸ್‌ಗೆ ಕ್ಷೇತ್ರದ ಜೊತೆಗೆ ಅಭ್ಯರ್ಥಿಗಳನ್ನು ದಾನ ಮಾಡುವ ಮೂಲಕ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅನಿಸುತ್ತಿಲ್ಲವಾ ನಿಮಗೆ?
ಕಾಂಗ್ರೆಸ್‌ ಎಲ್ಲಿಯೂ ಶರಣಾಗುತ್ತಿದೆ ಎಂಬ ಪ್ರಶ್ನೆ ಬರುವುದಿಲ್ಲ. ರಾಷ್ಟ್ರದ ಹಿತ ಕಾಪಾಡಲು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಪರಸ್ಪರ ವಿಶ್ವಾಸ ವೃದ್ಧಿ ಮಾಡಿಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ.

Advertisement

* ಬಿಜೆಪಿಯ ಭಾವನಾತ್ಮಕ ಪ್ರಚಾರಕ್ಕೆ ಕಾಂಗ್ರೆಸ್‌ ಕೌಂಟರ್‌ ಏನು?
ಸಾಮಾಜಿಕ ನ್ಯಾಯದ ಆಧಾರದಲ್ಲಿ “ಸರ್ವರ ಕಲ್ಯಾಣ, ಅಭಿವೃದ್ದಿಯೇ’ ಕಾಂಗ್ರೆಸ್‌ ಮಂತ್ರ. ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ “ನ್ಯಾಯ್‌’ ಯೋಜನೆ ಮೂಲಕ ಬಡತನದ ಮೇಲೆ ನಾವು ಪ್ರಹಾರ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ ಸುಮಾರು 5 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತದೆ.

ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ, ರೈತರಿಗೆ ವಿಶೇಷ ಕಾರ್ಯಕ್ರಮ, ಉದ್ಯೋಗ ಸೃಷ್ಠಿ ಮಾಡಲಾಗುವುದು. ನಾವು ಯಾವುದನ್ನು ಈಡೇರಿಸಲು ಸಾಧ್ಯವೋ ಅಂತಹ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. ಬಿಜೆಪಿ ಎಷ್ಟೇ ಭಾವನಾತ್ಮಕ ವಿಷಯ ಪ್ರಸ್ತಾಪ ಮಾಡಿದರೂ, ಜನರು ವಾಸ್ತವದ ಮೇಲೆ ಮತ ಚಲಾವಣೆ ಮಾಡುತ್ತಾರೆ. ಸುಳ್ಳು ಒಂದು ಸಾರಿ ನಡೆಯುತ್ತದೆ. ಮತ್ತೆ, ಮತ್ತೆ ನಡೆಯುವುದಿಲ್ಲ.

* ಬಲಿಷ್ಠ ರಾಷ್ಟ್ರಕ್ಕಾಗಿ ಬಿಜೆಪಿಗೆ ಮತ ಹಾಕಿ ಎಂದು ಅವರು ಕೇಳುತ್ತಿದ್ದಾರಲ್ಲಾ?
ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ, ಮನಮೋಹನ್‌ ಸಿಂಗ್‌ ಅವಧಿಯಲ್ಲಿಯೇ ಭಾರತ ಹೆಚ್ಚು ಬಲಿಷ್ಠ ರಾಷ್ಟ್ರವಾಗಿತ್ತು. ಉಗ್ರರ ವಿರುದ್ಧ ದಾಳಿ ಮಾಡುವ ಶಕ್ತಿಯನ್ನು ತಂದು ಕೊಟ್ಟಿರುವುದೇ ಕಾಂಗ್ರೆಸ್‌. ಬಿಜೆಪಿಯವರ ಅವಧಿಯಲ್ಲಿಯೇ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿಯೇ ದೇಶ ಹೆಚ್ಚು ಸುರಕ್ಷಿತವಾಗಿತ್ತು.

* ಕಳೆದ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಹೋರಾಟ ಕಾಂಗ್ರೆಸ್‌ಗೆ ನಷ್ಟವುಂಟು ಮಾಡಿತ್ತು ಎಂಬ ಮಾತು ಕೇಳಿ ಬಂದಿತ್ತು. ಈ ಚುನಾವಣೆಯಲ್ಲಿ ಹೇಗಿದೆ?
ವೀರಶೈವ-ಲಿಂಗಾಯತ ಪ್ರತ್ಯೇಕ ಅನ್ನುವುದು ಮುಗಿದು ಹೋದ ಅಧ್ಯಾಯ. ಕಾಂಗ್ರೆಸ್‌ ಜಾತ್ಯಾತೀತ ಪಕ್ಷ. ವೀರಶೈವ-ಲಿಂಗಾಯತ ಜಾತ್ಯತೀತ ಸಮುದಾಯ. ಸಮಾಜದ, ರಾಜ್ಯದ ಹಿತದೃಷ್ಠಿಯಿಂದ ವೀರಶೈವ-ಲಿಂಗಾಯತ ಸಮುದಾಯ ಈ ಬಾರಿ ಕಾಂಗ್ರೆಸ್‌ ಕೈ ಹಿಡಿಯುತ್ತದೆ ಎಂಬ ವಿಶ್ವಾಸ ಇದೆ.

* ನಿಮ್ಮನ್ನು ಸೋಲಿಸಲು ನಿಮ್ಮ ಪಕ್ಷದವರೇ ನಿಮ್ಮ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?
ನಮ್ಮ ಪಕ್ಷದವರೇ ನಿಲ್ಲಿಸಿದ್ದಾರೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಆದರೆ, ಕೆಲವರು ನಮ್ಮ ವಿರೋಧಿಗಳು ಅಲ್ಪಸಂಖ್ಯಾತರನ್ನು ನಿಲ್ಲಿಸಿ ಓಟು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅಲ್ಪಸಂಖ್ಯಾತ ಮತದಾರರು ಜಾಗೃತರಾಗಿದ್ದಾರೆ. ಸೋಲುವ ಅಭ್ಯರ್ಥಿಗೆ ಮತ ಹಾಕುವುದಿಲ್ಲ.

* ಈ ಚುನಾವಣೆಯಲ್ಲಿ ಡಬಲ್‌ ಡಿಜಿಟ್‌ ಬರೋದಿಲ್ಲಾ ಅಂತಿದಾರೆ?
ಅದೆಲ್ಲಾ ಸುಳ್ಳು. ಕೇಂದ್ರದಲ್ಲಿ 150 ರಿಂದ 175 ಸ್ಥಾನ ಗೆಲ್ಲುವ ವಿಶ್ವಾಸ ಇದೆ.

* ಈ ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆಯಲ್ಲಾ?
ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರ ರಚನೆಯಾದ ಮೇಲೆ ನಿರಂತರವಾಗಿ ಈ ಸರ್ಕಾರವನ್ನು ಅಸ್ಥಿರಗೊಳಿಸಲು ಅನೇಕ ಆಮಿಷ ಒಡ್ಡಿದ್ದರು. ಆದರೂ ಏನೂ ಆಗಲಿಲ್ಲ. ಈಗ ಜನರ ದಾರಿ ತಪ್ಪಿಸಲು ಚುನಾವಣೆ ನಂತರ ಸರ್ಕಾರ ಪತನವಾಗುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ, ಚುನಾವಣೆಯ ನಂತರವೂ ಯಾವುದೇ ಬದಲಾವಣೆ ಆಗುವುದಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next