ಮುಂಬಯಿ : ”169 ಅಮಾಯಕರ ಮಾರಣ ಹೋಮ ನಡೆದಿದ್ದ 2008ರ ಮುಂಬಯಿ ಮೇಲಿನ ಪಾಕ್ ಉಗ್ರರ 26/11ರ ದಾಳಿಗೆ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ; ಆದರೆ 2016ರ ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲಿನ ಪಾಕ್ ಉಗ್ರರ ದಾಳಿಗೆ ಕಠಿನ ಕ್ರಮತೆಗೆದುಕೊಂಡ ಎನ್‌ಡಿಎ ಸರಕಾರ, ಉಗ್ರರಿಗೆ ಅದೇ ಮೊದಲ ಬಾರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಸರಿಯಾದ ಪಾಠ ಕಲಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
”ಪಾಕಿಸ್ಥಾನದ ಬಾಲಾಕೋಟ್‌ನಲ್ಲಿನ ಜೆಇಎಂ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆದ ನಡೆಸಿರುವ ಬಾಂಬ್ ದಾಳಿಗೆ ಸಾಕ್ಷ್ಯ ಕೇಳುತ್ತಿರುವವರು ತಾವು ಅಧಿಕಾರದಲ್ಲಿದ್ದಾಗ ಉಗ್ರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ” ಎಂದು ಪ್ರಧಾನಿ ಮೋದಿ ಚಾಟಿ ಬೀಸಿದರು.
”ಇಂದಿನ ಭಾರತವು ನಯೀ ರೀತಿ, ನಯೀ ನೀತಿ ಎನ್ನುವ ಪ್ರಕಾರ ಕೆಲಸ ಮಾಡುತ್ತಿದೆ; 2016ರಲ್ಲಿ ಪಾಕ್ ಉಗ್ರರು ನಡೆಸಿದ್ದ ಉರಿ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಳ್ಳುವ ಮೂಲಕ ಭಾರತದ ಸೇನಾ ಪಡೆ ಅದೇ ಮೊದಲ ಬಾರಿಗೆ ಉಗ್ರರಿಗೆ ತಕುªದಾದ ಪಾಠವನ್ನು ಕಲಿಸಿದೆ” ಎಂದು ಮೋದಿ ಅವರು ಗ್ರೇಟರ್ ನೋಯ್ಡಾ ದಲ್ಲಿ ಇಂದು ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಹೇಳಿದರು.
”ನಿಮಗೆ (ಜನರಿಗೆ) ಏನೂ ಮಾಡದ ಸರಕಾರ ಬೇಕೇ ? ಅಥವಾ ಎಂದೂ ನಿದ್ದೆ ಮಾಡದ ಚೌಕೀದಾರ ಬೇಕೇ ?” ಎಂದು ಪ್ರಧಾನಿ ಮೋದಿ ನೆರೆದ ಜನಸಮೂಹವನ್ನು ಮಾರ್ಮಿಕವಾಗಿ ಪ್ರಶ್ನಿಸಿದರು.