Advertisement

ಲೋಕ ತಯಾರಿ : ಸೀಟು ಹಂಚಿಕೆ ಬಗ್ಗೆ ದೇವೇಗೌಡರ ಸಮ್ಮುಖದಲ್ಲಿ ನಿರ್ಧಾರ

12:29 AM Jan 25, 2019 | |

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆಗೂಡಿ ಸ್ಪರ್ಧಿಸಲು ಸಮನ್ವಯ ಸಮಿತಿ ಸಭೆಯಲ್ಲೂ ತೀರ್ಮಾನಿಸಲಾಗಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಸಮ್ಮುಖದಲ್ಲಿ ಸಭೆ ನಡೆದು ಸೀಟು ಹಂಚಿಕೆ ಕುರಿತು ನಿರ್ಧಾರವಾಗಲಿದೆ.

Advertisement

‘ದೇವೇಗೌಡರು ಇಲ್ಲದೆ ಸೀಟು ಹಂಚಿಕೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಯಾವ್ಯಾವ ಪಕ್ಷಕ್ಕೆ ಎಲ್ಲೆಲ್ಲಿ ಬಲವಿದೆ ಹಾಗೂ ಸ್ಥಳೀಯ ಪರಿಸ್ಥಿತಿ ಆಧಾರದ ಮೇಲೆ ಸೀಟು ಹಂಚಿಕೆ ನಡೆಯಲಿದೆ,’ ಎಂದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಂದಿನ ಸಭೆಯಲ್ಲಿ ಎರಡೂ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧೆ ಮಾಡಲು ಪೂರ್ವಭಾವಿ ಚರ್ಚೆ ನಡೆಸಲಾಗಿದೆ. ಉಳಿದಂತೆ ಸೀಟು ಹಂಚಿಕೆ ದೇವೇಗೌಡರ ಸಮ್ಮುಖದಲ್ಲಿ ತೀರ್ಮಾನವಾಗಲಿದೆ’ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದ್ದು, ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರಿರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಜೆಡಿಎಸ್‌ ಬೇಡಿಕೆ ಇಟ್ಟಿರುವ 12 ಕ್ಷೇತ್ರಗಳ ಬಗ್ಗೆ ಒಮ್ಮೆಲೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಸೀಟು ಹೊಂದಾಣಿಕೆ ಕುರಿತು ಚರ್ಚಿಸಲು ಇನ್ನೆರಡು ದಿನದಲ್ಲಿ ಮತ್ತೂಂದು ಸಭೆ ನಡೆಸಲು ಸಮನ್ವಯ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಎರಡೂ ಪಕ್ಷಗಳು ಜಂಟಿಯಾಗಿ ಆದಷ್ಟು ಬೇಗ ಸೀಟು ಹಂಚಿಕೆ ಮಾಡಿಕೊಂಡರೆ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಅನುಕೂಲವಾಗಲಿದ್ದು, ಕಾರ್ಯಕರ್ತರಲ್ಲಿ ಮೂಡುವ ಗೊಂದಲ ನಿವಾರಣೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.

ರೆಸಾರ್ಟ್‌ ಗಲಾಟೆಯಿಂದ ಮುಜುಗರ: ಆಪರೇಷನ್‌ ಕಮಲ ಹಾಗೂ ರೆಸಾರ್ಟ್‌ ರಾಜಕಾರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ರೆಸಾರ್ಟ್‌ ನಲ್ಲಿ ಕಾಂಗ್ರೆಸ್‌ ಶಾಸಕರು ಮಾಡಿಕೊಂಡಿರುವ ಗಲಾಟೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎನ್ನಲಾಗಿದ್ದು, ಆದರೆ, ಅದು ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರವಾದ್ದರಿಂದ ಅದನ್ನು ಕಾಂಗ್ರೆಸ್‌ ಪಕ್ಷವೇ ಬಗೆ ಹರಿಸಿಕೊಳ್ಳಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನಿಗಮ ಮಂಡಳಿ ಅಧ್ಯಕ್ಷ ನೇಮಕದ ಗೊಂದಲ ಕುರಿತಂತೆಯೂ ಕಾಂಗ್ರೆಸ್‌ ನಾಯಕರು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಕೆಲವು ನಿಗಮ ಮಂಡಳಿಗಳಿಗೆ ನೇಮಕಾತಿ ತಡೆ ಹಿಡಿದಿದ್ದು ಅನಗತ್ಯ ಗೊಂದಲಕ್ಕೆ ಕಾರಣವಾಯಿತು. ಪರಿಷತ್‌ ಸದಸ್ಯ ಗೋಪಾಲÓ್ವಾಮಿ ಅವರನ್ನು ಸಂಸದೀಯ ಕಾರ್ಯದರ್ಶಿ, ಶಾಸಕ ಡಾ. ಸುಧಾಕರ್‌ಗೆ ನೀಡಲಾಗಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ನೇಮಕವನ್ನು ತಡೆ ಹಿಡಿದಿರುವ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.

ಆನಂದ್‌ ಸಿಂಗ್‌ ಮೇಲೆ ಹಲ್ಲೆ ಮಾಡಿರುವ ಕಂಪ್ಲಿ ಶಾಸಕ ಗಣೇಶ್‌ ಅವರನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ನಾವು ಕಾನೂನು ಮಾಡುವವರು, ಕಾನೂನಿಗೆ ಗೌರವ ಕೊಡುವವರು. ಹೀಗಾಗಿ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ.

● ಸಿದ್ದರಾಮಯ್ಯ, ಮಾಜಿ ಸಿಎಂ

ಆಪರೇಷನ್‌ ಭೀತಿ ಇಲ್ಲ

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಆಪರೇಷನ್‌ ಕಮಲ ಸ್ಥಗಿತವಾಗಿದೆ. ಬಿಜೆಪಿಯಿಂದ ಯಾವುದೇ ರೀತಿಯ ಆಪರೇಷನ್‌ ಕಮಲ ನಡೆದಿಲ್ಲ.ಅವರು ಹಣದ ಆಮಿಷ ಒಡ್ಡಿ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದರು. ಆದರೆ, ಅವರ ಪ್ರಯತ್ನಕ್ಕೆ ಫ‌ಲ ದೊರೆಯಲಿಲ್ಲ ಎಂದು ಸಿದ್ದು ಹೇಳಿದರು. ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಕುರಿತಂತೆ ರಾಜ್ಯ ಸರ್ಕಾರದ ಪರ ವಕೀಲ ಮುಕುಲ್‌ ರೋಹಟಗಿ ಅವರ ಅಭಿಪ್ರಾಯದಂತೆ ಕಾಯ್ದೆ ಜಾರಿಗೊಳಿಸಲು ಮುಖ್ಯಮಂತ್ರಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ, ಬಳ್ಳಾರಿ ಶಾಸಕರ ರೆಸಾರ್ಟ್‌ ಗಲಾಟೆ ಕುರಿತು ಮಾಜಿ ಸಚಿವ ಜನಾರ್ದನ ರೆಡ್ಡಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಜನಾರ್ದನ ರೆಡ್ಡಿ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನನಗೆ ರಾಜ್ಯದ ಯಾವ ನಾಯಕರ ಮೇಲೆಯೂ ಅಸಮಾಧಾನ ಇಲ್ಲ ಎಂದು ಹೇಳಿದರು.

ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆ ಕುರಿತಂತೆ ಪ್ರಾಥಮಿಕ ಹಂತದ ಚರ್ಚೆಯಾಗಿದೆ. ಆದರೆ, ಯಾರಿಗೆ ಎಷ್ಟು ಸೀಟು ಎಂದು ನಿರ್ಧರಿಸಲು ಇನ್ನೂ ಹಲವು ಸುತ್ತಿನ ಮಾತುಕತೆ ನಡೆಯ ಬೇಕಿದೆ. 25 ಸ್ಥಾನ ಗೆಲ್ಲುವುದು ನಮ್ಮ ಗುರಿ. • ಡ್ಯಾನಿಶ್‌ ಅಲಿ, ಜೆಡಿಎಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next