Advertisement

ತುಮಕೂರು, ಮೈಸೂರಲ್ಲಿ ಕೈ-ದಳ ಮೈತ್ರಿ ಖಚಿತ 

06:00 AM Sep 05, 2018 | |

ಕಳೆದ ಶುಕ್ರವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪೈಕಿ ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಮಹಾನಗರಪಾಲಿಕೆಯ ಮೇಯರ್‌ ಆಗಿ ಲತಾ ಗಣೇಶ್‌ ಆಯ್ಕೆ ಬಹುತೇಕ ಖಚಿತವಾಗಿದೆ. ಈ ಮಧ್ಯೆ, ತುಮಕೂರು ಹಾಗೂ ಮೈಸೂರು ಮಹಾನಗರಪಾಲಿಕೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ವೇದಿಕೆ ಸಿದಟಛಿಗೊಳ್ಳುತ್ತಿದೆ. ಮೈಸೂರಲ್ಲಿ ಜೆಡಿಎಸ್‌ನ ಅಶ್ವಿ‌ನಿ ಅನಂತು ಹೆಸರು ಮೇಯರ್‌ ಹುದ್ದೆಗೆ ಮುಂಚೂಣಿಯಲ್ಲಿದ್ದರೆ, ತುಮಕೂರಲ್ಲಿ ಮಾಜಿ ಮೇಯರ್‌ ಜೆಡಿಎಸ್‌ನ ಲಲಿತಾ ಹೆಸರು ಮುಂಚೂಣಿಯಲ್ಲಿದೆ.

Advertisement

ಅಶ್ವಿ‌ನಿಗೆ ಹೆಚ್ಚಿದ ಅವಕಾಶ 
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಅತಂತ್ರವಾದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರ ಹಿಡಿಯಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್‌ ಸ್ಥಾನ ಹಿಂದುಳಿದ “ಎ’ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ ಕಾಂಗ್ರೆಸ್‌ನಲ್ಲಿ 7 ಹಾಗೂ ಜೆಡಿಎಸ್‌ನಲ್ಲಿ 11 ಮಹಿಳೆಯರು ಮೇಯರ್‌ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಪ್ರಮುಖ ವಾಗಿ ಜೆಡಿಎಸ್‌ನಿಂದ ಎರಡನೇ ಬಾರಿ ಗೆದ್ದಿರುವ ಅಶ್ವಿ‌ನಿ ಅನಂತು ಅವರಿಗೆ ಹೆಚ್ಚು ಅವಕಾಶವಿದೆ ಎನ್ನಲಾಗುತ್ತಿದೆ. ಇನ್ನು ಮೊದಲ ಬಾರಿಗೆ ಗೆದ್ದಿರುವ ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್‌, ನಿರ್ಮಲಾ ಹರೀಶ್‌ ಸಹ ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ, ಕಾಂಗ್ರೆಸ್‌ನಲ್ಲಿ 2ನೇ ಬಾರಿಗೆ ಪಾಲಿಕೆ ಪ್ರವೇಶಿಸಿರುವ ಎಚ್‌.ಎಂ.ಶಾಂತಕುಮಾರಿ, ಪುಷ್ಪಲತಾ ಜಗನ್ನಾಥ್‌ ಮೇಯರ್‌ ಸ್ಥಾನಕ್ಕೇರುವ ತವಕದಲ್ಲಿದ್ದಾರೆ.

ಉಳಿದಂತೆ ನೂತನವಾಗಿ ಗೆದ್ದಿರುವ ಪುಟ್ಟನಿಂಗಮ್ಮ, ಭುವನೇಶ್ವರಿ, ಶೋಭಾ, ಹಾಜಿರಾ ಸೀಮಾ ಕೂಡ ರೇಸ್‌ನಲ್ಲಿದ್ದಾರೆ. ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ರೇಸ್‌ನಲ್ಲಿದ್ದಾರೆ. ಆದರೆ ಮೇಯರ್‌ ಸ್ಥಾನ ಮಹಿಳೆಯರಿಗೆ ಮೀಸಲಾದ ಕಾರಣಕ್ಕೆ ಉಪಮೇಯರ್‌ ಸ್ಥಾನವನ್ನು ಪುರುಷ ಅಭ್ಯರ್ಥಿಗೆ ನೀಡಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. 

ಆಟೋ ಡ್ರೈವರ್‌ ಪತ್ನಿ ಮೇಯರ್‌ 
ಶಿವಮೊಗ್ಗ: ರಾಜಕೀಯ ಚದುರಂಗದಾಟದಲ್ಲಿ ಅದೃಷ್ಟ ಖುಲಾಯಿಸಿದರೆ ಅಧಿಕಾರ ಒಲಿದು ಬರುತ್ತೆ ಅನ್ನೋದಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್‌ ಪಟ್ಟ ಸಾಕ್ಷಿಯಾಗಿದೆ. ಪಾಲಿಕೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಿಜೆಪಿ, ಅಧಿಕಾರದ ಚುಕ್ಕಾಣಿ ಹಿಡಿಯೋದು ಪಕ್ಕಾ ಆಗುತ್ತಿದ್ದಂತೆಯೇ ಮೀಸಲಾತಿಯೂ ಪ್ರಕಟಗೊಂಡಿದೆ. ಮೇಯರ್‌ ಸ್ಥಾನ ಎಸ್‌.ಸಿ.ಮಹಿಳೆ, ಉಪಮೇಯರ್‌ ಸ್ಥಾನ ಸಾಮಾನ್ಯ ವರ್ಗದ ಪಾಲಾಗಿದೆ. ಪಾಲಿಕೆಯ ಗಾಡಿಕೊಪ್ಪ ವಾರ್ಡ್‌ನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಅಲ್ಲದೆ, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಲತಾ ಗಣೇಶ್‌ ಅವರಿಗೆ ಮೇಯರ್‌ ಪಟ್ಟ ಒಲಿದಿದೆ. ಆಟೋ ಚಾಲಕನ ಪತ್ನಿಯಾಗಿರುವ ಇವರು ಬಡ ಕುಟುಂಬದಿಂದ ಬಂದವರು. ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆಯಾಗಿ, ನಂತರ ಪಕ್ಷದ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ್ದಲ್ಲದೆ, ಮೇಯರ್‌ ಪಟ್ಟವೂ ಇವರಿಗೆ ದಕ್ಕಿದೆ.

ನನ್ನ ವಾರ್ಡ್‌ನ ಜವಾಬ್ದಾರಿಯ ಜತೆಗೆ 34 ವಾರ್ಡ್‌ಗಳ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ. ಶಿವಮೊಗ್ಗದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಏನೇನು ಕೆಲಸ ಮಾಡಬೇಕೋ ಅದನ್ನು ಮಾಡುತ್ತೇನೆ. 
ಲತಾ ಗಣೇಶ್‌, ನಿಯೋಜಿತ ಮೇಯರ್‌ 

Advertisement

ಜೆಡಿಎಸ್‌ನ ಲಲಿತಾ ಹೆಸರು ಮುಂಚೂಣಿಯಲ್ಲಿ
ತುಮಕೂರು: ತುಮಕೂರು ಮಹಾನಗರ ಪಾಲಿಕೆ ಯಾದ ಮೇಲೆ ನಡೆದಿರುವ ಮೊದಲ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದರೂ, ಅಧಿಕಾರ ಹಿಡಿಯಲು ಬಹುಮತದ ಕೊರತೆ ಇದೆ. ಈ ಹಿಂದಿನಿಂದಲೂ ಸಮ್ಮಿಶ್ರವಾಗಿಯೇ ಆಡಳಿತ ನಡೆಸಿರುವ 
ಪಾಲಿಕೆಗೆ ಮತ್ತೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರದ ಆಡಳಿತ ಬರಲಿದ್ದು, ಈ ಬಾರಿ ಮೇಯರ್‌ ಆಗಿ ಜೆಡಿಎಸ್‌ನ ಮಾಜಿ ಮೇಯರ್‌ ಲಲಿತಾ ಮತ್ತೆ ಗದ್ದುಗೆ ಏರುವ ಸಾಧ್ಯತೆಗಳು ಕಂಡು ಬಂದಿದೆ. ಬಿಜೆಪಿ 12, ಕಾಂಗ್ರೆಸ್‌ 10, ಜೆಡಿಎಸ್‌ 10, ಪಕ್ಷೇತರ 3 ಸದಸ್ಯರು ಪಾಲಿಕೆಗೆ ಆಯ್ಕೆ ಯಾಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಯಾಗಿ ಅಧಿಕಾರ ನಡೆಸಲು ಸಿದ್ಧತೆಗಳನ್ನು ಮಾಡಿ ಕೊಂಡಿವೆ. ಮೀಸಲಾತಿಯನ್ವಯ ಬಿಸಿಎ ಮಹಿಳೆಗೆ ಮೇಯರ್‌ ಸ್ಥಾನ, ಎಸ್‌.ಸಿ.ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಿದ್ದು, ಮೇಯರ್‌ ಸ್ಥಾನವನ್ನು ಪಡೆಯಲು ಈಗಾಗಲೇ ಜೆಡಿಎಸ್‌ನ ಚುನಾಯಿತಿ ಸದಸ್ಯರು ವೇದಿಕೆ ಸಿದ್ದಮಾಡಿಕೊಳ್ಳುತ್ತಿದ್ದಾರೆ.

ಪಾಲಿಕೆಯಲ್ಲಿ ಈ ಹಿಂದಿನಂತೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಂದುವರೆದರೆ 21ನೇ ವಾರ್ಡಿನಿಂದ ಗೆಲುವು ಸಾಧಿಸಿರುವ ಲಲಿತಾ ಮೇಯರ್‌ ಆಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಮೊದಲ ಅವಧಿಗೆ ಜೆಡಿಎಸ್‌ ಅಧಿಕಾರ ಗಿಟ್ಟಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದು, ಇದಕ್ಕೆ ಕಾಂಗ್ರೆಸ್‌ ಕೂಡ ಕೈ ಜೋಡಿಸಿದೆ. ಬಿಜೆಪಿಗೆ ಬಹುಮತದ ಕೊರತೆ ಇರುವ ಹಿನ್ನೆಲೆ ಯಲ್ಲಿ ಲಲಿತಾ ಮೇಯರ್‌ ಆಗುವುದು ಬಹುತೇಕ ಖಚಿತ. ಆದರೆ, ಬಿಜೆಪಿ ಬೇರೆ ರೀತಿಯಲ್ಲಿ ತಂತ್ರಗಾರಿಕೆ ರೂಪಿಸಿದರೆ ಜೆಡಿಎಸ್‌ ಅಧಿಕಾರ ಹಿಡಿಯುವುದು ಕಷ್ಟವಾಗಬಹುದು. ಈ ಮಧ್ಯೆ, ಮಂಗಳವಾರ ಜೆಡಿಎಸ್‌ ಸದಸ್ಯರು ಜಿಲ್ಲಾ ಜೆಡಿಎಸ್‌ ಅಧ್ಯಕ್ಷರು, ಮಾಜಿ ಸಚಿವರಾದ ಸಿ.ಚೆನ್ನಿಗಪ್ಪ ಅವರನ್ನು ಭೇಟಿ ಮಾಡಿ, ಮೇಯರ್‌ ಸ್ಥಾನವನ್ನು ಲಲಿತಾಗೆ ನೀಡುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.

ಇನ್ನು, ಉಪಮೇಯರ್‌ಗೆ ಮೀಸಲಾಗಿರುವ ಪರಿಶಿಷ್ಟ ಜಾತಿ ಮಹಿಳಾ ಕ್ಷೇತ್ರದಿಂದ 9ನೇ ವಾರ್ಡಿನ ಪ್ರಭಾವತಿ ಸುಧೀಶ್ವರ್‌ ಮತ್ತು 19ನೇ ವಾರ್ಡಿನಿಂದ ರೂಪಶ್ರೀ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಲ್ಲಿ ಎಸ್‌.ಸಿ. ಮಹಿಳೆ ಇಲ್ಲದೆ ಇರುವುದರಿಂದ ಕಾಂಗ್ರೆಸ್‌ಗೆ ಈ ಸ್ಥಾನ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next