ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಕಾಂಗ್ರೆಸ್-ಜೆಡಿಎಸ್ ಮುಕ್ತವಾಗಿಸುವುದು ಬಿಜೆಪಿಯ ಸದ್ಯದ ಗುರಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರ ಪರ ವೃಷಭಾವತಿ ಹಾಗೂ ನಂದಿನಿ ಲೇಔಟ್ ವಾರ್ಡ್‌ಗಳ ಹಲವೆಡೆ ಭಾನುವಾರ ಬಿರುಸಿನ ಪ್ರಚಾರ ನಡೆಸಿದ ವೇಳೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು, ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು.
ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಈಗಾಗಲೇ ದಿಟ್ಟ ಹೆಜ್ಜೆ ಇಡಲಾಗಿದೆ. ಅದರಂತೆ ಬೆಂಗಳೂರು ನಗರವನ್ನು ಕಾಂಗ್ರೆಸ್-ಜೆಡಿಎಸ್ ಮುಕ್ತ ಮಾಡಲು ಮತದಾರರು ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನೆಲೆ ಕಳೆದುಕೊಂಡಿವೆ. ಆ ಪಕ್ಷಗಳ ಕಾರ್ಯಕರ್ತರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ವಿರೋಧಿಗಳು ಹತಾಶರಾಗಿ ಗೋಪಾಲಯ್ಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮತದಾರರು ರಾಜ್ಯದ, ಕ್ಷೇತ್ರದ ಹಿತಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಕೋರಿದರು. ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಮಾತನಾಡಿ, ಕ್ಷೇತ್ರದ ಜನರಿಗೆ ಸೂರು ಹಾಗೂ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಬಡವರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳ ಮೂಲಕ ಬಡವರ ಸೂರಿನ ಕನಸನ್ನು ನನಸು ಮಾಡಲಾಗುವುದು.
ಅಂತೆಯೇ ಕ್ಷೇತ್ರದ ಕಮಲಾನಗರ, ವೃಷಭಾವತಿ ನಗರ ಸೇರಿ ವಿವಿಧೆಡೆ 25 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳನ್ನು ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು. ಸಚಿವ ಸುರೇಶ್‌ಕುಮಾರ್, ಮಾಜಿ ಶಾಸಕರಾದ ಮುನಿರತ್ನ, ನೆ.ಲ.ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ನಗರ ಬೆಜೆಪಿ ಹೋಟೆಲ್ ಮಾಲೀಕರ ಪ್ರಕೋಷ್ಠದ ಸಂಚಾಲಕ ರಾಘವೇಂದ್ರ ಶೆಟ್ಟಿ, ಮುಖಂಡರು ಹಾಗೂ ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.