Advertisement

ಕೋಮುವಾದದ ವಿರುದ್ಧ “ಕೈ’-ಜೆಡಿಎಸ್‌ ಹೋರಾಟ: ಮೈತ್ರಿ ಅಭ್ಯರ್ಥಿಕೆ.ಎಚ್‌.ಮುನಿಯಪ್ಪ

12:12 PM Apr 12, 2019 | Team Udayavani |

ದಿನದಿಂದ ದಿನಕ್ಕೆ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತಬೇಟೆ ಚುರುಕಾಗುತ್ತಿದೆ. ಮತ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಅಭ್ಯರ್ಥಿಗಳು “ಅಭಿವೃದ್ಧಿ’ ಮಂತ್ರ ಜಪಿಸಿದ್ದಾರೆ. ಈ ನಿಟ್ಟಿನಲ್ಲಿ “ನಿಮಗೇ ಏಕೆ ಮತ ನೀಡಬೇಕು’ ಎಂಬ ಮತದಾರನ ಪ್ರಶ್ನೆ ಹಿನ್ನೆಲೆಯಲ್ಲಿ “ಉದಯವಾಣಿ’ ಅಭ್ಯರ್ಥಿಗಳನ್ನು ಸಂದರ್ಶಿಸಿದೆ. ಇಲ್ಲಿ ಸ್ಪರ್ಧಿಗಳು ತಮ್ಮ ಅಂತರಾಳ ಬಿಚ್ಚಿಟ್ಟಿದ್ದಾರೆ.

Advertisement

*ಚುನಾವಣೆಗೆ ಸ್ಪರ್ಧಿಸಿರುವ ಉದ್ದೇಶವೇನು?
ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ತರಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಸರ್ವಸಮ್ಮತ ಅಭ್ಯರ್ಥಿಯಾಗಿ ತಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೇಂದ್ರದಲ್ಲಿಯೂ ಕೋಮುವಾದಿ ಬಿಜೆಪಿ ಸರ್ಕಾರವನ್ನು ತೊಲಗಿಸುವ ಉದ್ದೇಶದಿಂದಲೇ ಕಾಂಗ್ರೆಸ್‌ ತಮಗೇ ಮತ್ತೆ ಅವಕಾಶ ಕಲ್ಪಿಸಿದೆ.

*ಕಣದಲ್ಲಿ 14 ಮಂದಿ ಇದ್ದಾರೆ, ಜನ ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
ಕೋಲಾರ ಬರಪೀಡಿತ ಪ್ರದೇಶ. 28 ವರ್ಷಗಳ ಅವಧಿಯಲ್ಲಿ 7 ಬಾರಿ ಗೆಲುವು ಸಂಪಾದಿಸಿರುವ ತಮಗೆ, ಕೇಂದ್ರದಲ್ಲಿ 2 ಅವಧಿಗೆ ಸಚಿವರಾಗುವ ಅವಕಾಶ ದೊರಕಿತ್ತು. ಈ ಅವಧಿ ಯಲ್ಲಿ ತಮ್ಮ ಇತಿ ಮಿತಿಯಲ್ಲಿ ಆದಷ್ಟು ಕೆಲಸ ಮಾಡಿಸಿದ್ದೇನೆ. ಮಾಡಬೇಕಾದದ್ದು ಸಾಕಷ್ಟಿವೆ. ಇನ್ನು ಚತುಷ್ಪಥ ಹೆದ್ದಾರಿ ಅಭಿವೃದ್ಧಿ, ಜಿಲ್ಲೆಯ ರೈಲ್ವೆ ಮಾರ್ಗ ಮತ್ತು ನಿಲ್ದಾಣ ಮೇಲ್ದಜೇìಗೇರಿಸಿರುವುದು. ಹೆಚ್ಚಿನ ರೈಲು ಓಡಾಡುವಂತೆ ಮಾಡಿರು ವುದು. ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳು ಜಿಲ್ಲೆಗೆ ಬರುವಂತೆ ಮಾಡಿರುವುದು. ತಮ್ಮ ಸುದೀರ್ಘ‌ ಅವಧಿಯಲ್ಲಿ ಇಡೀ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿದ್ದೇನೆ. ಇವೆಲ್ಲದರ ಆಧಾರದ ಮೇಲೆ ಜನ ತಮ್ಮನ್ನು ಗೆಲ್ಲಿಸುತ್ತಲೇ ಇದ್ದಾರೆ.

*ನಿಮ್ಮ ಮೇಲಿರುವ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
ಚುನಾವಣೆ ವೇಳೆ ಆರೋಪ- ಅಪಪ್ರಚಾರ ಸಹಜ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಪಾರದರ್ಶ ಕವಾಗಿಯೇ ತಮ್ಮ ಆಸ್ತಿ ಘೋಷಣೆ ಮಾಡಿ ಕೊಂಡಿದ್ದೇನೆ. ಅದನ್ನು ಹೊರತುಪಡಿಸಿ ಉಳಿದ ಆರೋಪಗಳು ಸರಿಯಲ್ಲ. ಕೆ.ಸಿ.ವ್ಯಾಲಿ ಯೋಜನೆ ಆರಂಭಿಸಲು ಶ್ರಮಿಸಿದ್ದೇವೆ. ಅದಕ್ಕೆ ಅಡ್ಡಿಪಡಿಸುವುದು ಸಾಧ್ಯವೇ ಇಲ್ಲ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಎಲ್ಲಾ ದಲಿತ ಸಮುದಾಯ ದವರಿಗೂ ನ್ಯಾಯಯುತ ಪಾಲು ಕೇಳಲಾಗಿದೆಯೇ ಹೊರತು ಯಾರನ್ನು ಪರಿಶಿಷ್ಟ ಪಟ್ಟಿಯಿಂದ ಹೊರಗಿಡುವಂತೆ ಒತ್ತಾಯಿಸಿಲ್ಲ. ಆದರೂ, ಕೆಲವರು ರಾಜಕೀಯ ಕಾರಣಗಳಿಂದ ಚುನಾವಣೆ ವೇಳೆ ಆರೋಪ ಹೊರೆಸುತ್ತಿದ್ದಾರೆ. ಕ್ಷೇತ್ರದ ಜನರಿಗೆ ತಾವೇನು ಎನ್ನುವುದರ ಅರಿವು ಇರುವುದರಿಂದ ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ.

*ಕಾಂಗ್ರೆಸ್‌ ಶಾಸಕರೇ ಪ್ರಚಾರಕ್ಕೆ ಬರುತ್ತಿಲ್ಲವಲ್ಲ?
ಕಾಂಗ್ರೆಸ್‌ ದೊಡ್ಡ ಪಕ್ಷ. ಇಲ್ಲಿ ಭಿನ್ನಮತ, ಅಸಮಾಧಾನ ಸಾಮಾನ್ಯ. ಈಗಾಗಲೇ ತಮ್ಮೊಂದಿಗೆ ಮುನಿಸಿಕೊಂಡಿದ್ದ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇನ್ನುಳಿದವರು ಕೆಲವೇ ದಿನಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವ ವಿಶ್ವಾಸ ತಮಗಿದೆ. ಶನಿವಾರ ರಾಹುಲ್‌ ಗಾಂಧಿ ಕೋಲಾರಕ್ಕೆ ಭೇಟಿ ಕೊಟ್ಟು ಪ್ರಚಾರ ನಡೆಸುವರು. ಜೆಡಿಎಸ್‌ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಸಹಕಾರದೊಂದಿಗೆ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಶಕ್ತಿ ಪ್ರದರ್ಶನ ನಡೆಯಲಿದೆ. ಎಲ್ಲಾ ಸಮಸ್ಯೆ ಬಗೆಹರಿಯಲಿವೆ.

Advertisement

*ಚುನಾವಣೆ ಪ್ರಚಾರದಲ್ಲಿ ಒಂಟಿಯಾಗಿದ್ದೀರಿ ಎನಿಸುತ್ತಿಲ್ಲವೇ ?
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ಗೆ ದೊಡ್ಡ ಮಟ್ಟದಲ್ಲಿ ಮತದಾರರ ಜಾಲವಿದೆ. ಈ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಹೇಗೆ ಒಂಟಿಯಾಗಿ ಪ್ರಚಾರ ನಡೆಸಲು ಸಾಧ್ಯ. ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಈಗಾಗಲೇ ತಾಲೂಕು ಮಟ್ಟದ ಸಭೆಗಳ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಸಭೆಯಲ್ಲಿಯೂ ಸಹಸ್ರಾರು ಮಂದಿ ಭಾಗವಹಿಸುತ್ತಿದ್ದಾರೆ.

*ನಿಮ್ಮ ಪ್ರತಿಸ್ಪರ್ಧಿ ಎಸ್‌.ಮುನಿಸ್ವಾಮಿ ಕುರಿತು ನಿಮ್ಮ ಅಭಿಪ್ರಾಯವೇನು?
ಚುನಾವಣೆ ಪಕ್ಷಗಳ ಆಧಾರದ ಮೇಲೆ ನಡೆಯುತ್ತಿದೆ. ಯಾರ ಕುರಿತು ವೈಯಕ್ತಿಕವಾಗಿ ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ. ಎಸ್‌.ಮುನಿಸ್ವಾಮಿ ತಮಗೆ ಪರಿಚಯವಿರುವವರೇ ಆಗಿದ್ದಾರೆ. ಅನೇಕ ಬಾರಿ ತಮ್ಮನ್ನು ಭೇಟಿ ಮಾಡಿದ್ದರು. ಈಗ ಬಿಜೆಪಿ ಅವರಿಗೆ ಅವಕಾಶ ಕಲ್ಪಿಸಿದೆ. ತಮಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಆಯ್ಕೆ ಮತದಾರರದ್ದು.

*ಪ್ರಚಾರ ಕಾರ್ಯತಂತ್ರಗಳೇನು?
28 ವರ್ಷಗಳಿಂದಲೂ ಕೋಲಾರ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿ ಸುತ್ತಿರುವುದರಿಂದ ಕ್ಷೇತ್ರದ ಪರಿಚಯ ಹೊಸದೇನಲ್ಲ. 7 ಬಾರಿ ಹೇಗೆ ಪ್ರಚಾರ ನಡೆಸುತ್ತಿದ್ದೆವೋ ಹಾಗೆಯೇ ಈ ಬಾರಿಯೂ ಪ್ರಚಾರ ಸಾಗಿದೆ. ತಾಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌-ಜೆಡಿಎಸ್‌ಗೆ ಇರುವ ಮತಗಟ್ಟೆ ಹಂತದ ಕಾರ್ಯಕರ್ತ ಮುಖಂಡರು ಪ್ರಚಾರದ ನೇತೃತ್ವ ವಹಿಸಿಕೊಂಡಿದ್ದಾರೆ.

*ಜನರ ಪ್ರತಿಕ್ರಿಯೆ ಹೇಗಿದೆ?
ಕೋಲಾರ ಕ್ಷೇತ್ರದ ಜನ ತಮ್ಮನ್ನು 8ನೇ ಬಾರಿಯೂ ಗೆಲ್ಲಿಸುತ್ತಾರೆಂಬ ವಿಶ್ವಾಸ ತಮಗಿದೆ. ಒಂದೆರೆಡು ಪ್ರಚಾರ ಸಭೆಗಳಲ್ಲಿ ಕೆಲವರು ಗಲಭೆ, ಗದ್ದಲ ಎಬ್ಬಿಸಿರಬಹುದು. ಆದರೆ, ಅವರೂ ಪಕ್ಷದ ಕಾರ್ಯಕರ್ತ, ಮುಖಂಡರೇ ಆಗಿದ್ದಾರೆ. ತಮ್ಮ ಅಸಮಾಧಾನ ಬಗೆಹರಿಸಿಕೊಂಡು ತಮ್ಮ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ಬಾರಿಯೂ ತಮ್ಮದೇ ಗೆಲುವು ಎಂಬ ಮುನ್ಸೂಚನೆ ಸಿಗುತ್ತಿದೆ.

ನಿಮ್ಮ ಭರವಸೆಗಳೇನು?
* ಜಿಲ್ಲೆಗೆ ಕೆ.ಸಿ.ವ್ಯಾಲಿ ಜೊತೆಗೆ ಎತ್ತಿನಹೊಳೆ ನೀರು ಶೀಘ್ರ ಹರಿಯುವಂತೆ ಮಾಡಬೇಕಿದೆ.
* ಚಿನ್ನದ ಗಣಿ ಪುನಾರಂಭ, ಕೈಗಾರಿಕೆಗಳ ಅಭಿವೃದ್ಧಿ
* ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗವನ್ನು ಚೆನ್ನೈ-ಬೆಂಗಳೂರು ಮಾರ್ಗಕ್ಕೆ ಪರ್ಯಾಯವಾಗಿ ಅಭಿವೃದ್ಧಿ ಪಡಿಸಿ ಹೆಚ್ಚು ರೈಲು  ಸಂಚರಿಸುವಂತೆ ಮಾಡುವುದು.
* ಮಂಜೂರಾಗಿರುವ ರೈಲ್ವೆ ಕೋಚ್‌ ಫ್ಯಾಕ್ಟರಿಯನ್ನು ಜಿಲ್ಲೆಯಲ್ಲಿಯೇ ಆರಂಭಿಸಲು ಕ್ರಮ
* ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕೆ ವಲಯಗಳನ್ನು ಆರಂಭಿಸಿ
ಉದ್ಯೋಗವಕಾಶ ಹೆಚ್ಚಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next