Advertisement
ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡಿಸಿದ್ದು ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಭಾಗಿಯಾಗಿರುವುದರಿಂದ ಮತ್ತೂಂದು ಬಜೆಟ್ ಮಂಡಿಸುವುದು ಬೇಡ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಸಾಲ ಮನ್ನಾ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು. ಇತ್ತೀಚೆಗೆ ನಡೆದ ಸಮನ್ವಯ ಸಮಿತಿಯಲ್ಲೂ ಇದೇ ಪ್ರತಿಪಾದನೆ ಮಾಡಿದ್ದಾರೆ.
Related Articles
Advertisement
ಹೀಗಾಗಿ, ರಾಜ್ಯದ ಕಾಂಗ್ರೆಸ್ ನಾಯಕರು ಬಜೆಟ್ ಮಂಡನೆಗೆ ತಕರಾರು ತೆಗೆದದರೆ ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಜತೆಯೇ ಮಾತನಾಡಿ ಬಜೆಟ್ ಮಂಡನೆಗೆ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಜತೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಲೋಕಸಭೆ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಹಾಗೂ ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಎಸ್‌ಪಿ, ಬಿಎಸ್‌ಪಿ, ಟಿಟಿಡಿ, ಟಿಆರ್‌ಎಸ್, ಟಿಎಂಸಿ, ಬಿಜೆಡಿ, ಆರ್‌ಜೆಡಿ, ಎಡಪಕ್ಷಗಳಿಗೆ ಹತ್ತಿರವಾಗಿರುವ ಕಾಂಗ್ರೆಸ್ ಜೆಡಿಎಸ್‌ನ ಯಾವುದೇ ಮಾತಿಗೂ ನಿರಾಕರಿಸುವ ಸಾಧ್ಯತೆಯೂ ಇಲ್ಲ.
ಅಷ್ಟೇ ಅಲ್ಲದೆ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಾಗ ಖುದ್ದು ರಾಹುಲ್‌ಗಾಂಧಿ ದೂರವಾಣಿ ಕರೆ ಮಾಡಿ ನೀವೂ ಅತೃಪ್ತಿ ನಿವಾರಣೆಗೆ ನಿಮ್ಮದೇ ಆದ ಪ್ರಯತ್ನ ಮಾಡಿ ಎಂದೂ ಹೇಳಿದ್ದರು. ಅಲ್ಲಿಂದ ಕರೆ ಬಂದ ನಂತರವೇ ಕುಮಾರಸ್ವಾಮಿ ಎಂ.ಬಿ.ಪಾಟೀಲ್ ಅವರ ನಿವಾಸಕ್ಕೆ ಹೋಗಿದ್ದು. ಸತೀಶ್ ಜಾರಕಿಹೊಳಿ ಎಚ್.ಡಿ.ಕುಮಾರಸ್ವಾಮಿ ನಿವಾಸಕ್ಕೂ ಬಂದಿದ್ದು. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ-ರಾಹುಲ್‌ಗಾಂಧಿ ಸ್ನೇಹ ಚಿಗುರೊಡೆದಿದೆ.
ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ನಾಯಕತ್ವ ವಹಿಸಿರುವ ತಮಗೆ ಹೊಸ ಬಜೆಟ್ ಮಂಡಿಸಲು ರಾಜ್ಯ ನಾಯಕರು ತಕರಾರು ತೆಗೆದರೆ ನೇರವಾಗಿ ರಾಹುಲ್‌ಗಾಂಧಿ ಜತೆಯೇ ಮಾತನಾಡಿ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಬಜೆಟ್ ಮಂಡಿಸುವ ಪ್ರಸ್ತಾಪ ಕೈ ಬಿಡಲು ಸಾಧ್ಯವಿಲ್ಲ. ನೀವು ಸಿದ್ಧತೆ ಮಾಡಿಕೊಳ್ಳಿ ಎಂದು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಂಪನ್ಮೂಲ ಕ್ರೂಢೀಕರಣ ಸಂಬಂಧ ಸೂಕ್ತ ಕಾರ್ಯಯೋಜನೆ ರೂಪಿಸುವಂತೆ ಆರ್ಥಿಕ ಸಲಹೆಗಾರ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಸುಬ್ರಹ್ಮಣ್ಯ ಅವರಿಗೂ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಸಾಲ ಮನ್ನಾಗೆ 53 ಸಾವಿರ ಕೋಟಿ ರೂ. ಬೇಕು ಎಂಬ ಅಭಿಪ್ರಾಯ ಮೊದಲು ಇತ್ತಾದರೂ ಅಂಕಿ-ಅಂಶ, ಕೆಲವೊಂದು ಷರತ್ತು ಹಿನ್ನೆಲೆಯಲ್ಲಿ 20 ಸಾವಿರ ಕೋಟಿ ರೂ.ವರೆಗೆ ಹಾಗೂ ಉಳಿದ ಯೋಜನೆಗಳಿಗೆ 10 ರಿಂದ 15 ಸಾವಿರ ಕೋಟಿ ರೂ.ವರೆಗೆ ಹೊರೆ ಬೀಳಬಹುದು. ಹೀಗಾಗಿ, ಈಗಿನ ಬಜೆಟ್‌ನ ಗಾತ್ರದಲ್ಲಿ 25 ಸಾವಿರ ಕೋಟಿ ರೂ.ವರೆಗೆ ಹೆಚ್ಚಳವಾಗಬಹುದು. ಅದರಲ್ಲೂ ಬೇರೆ ಬೇರೆ ಇಲಾಖೆಗಳ ಅನಗತ್ಯ ಹಾಗೂ ಐದು ವರ್ಷಗಳಲ್ಲಿ ಜಾರಿ ಮಾಡಲು ಸಾಧ್ಯವಾಗದೇ ಇರುವ ಕಾರ್ಯಕ್ರಮಗಳನ್ನು ಕೈ ಬಿಟ್ಟರೆ ಮತ್ತೂ ಬಜೆಟ್ ಗಾತ್ರ ಕಡಿಮೆಯಾಗುತ್ತದೆ ಎಂದು ಆರ್ಥಿಕ ಸಲಹೆಗಾರರು ಕುಮಾರಸ್ವಾಮಿಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರಿಗೆ ಈ ಎಲ್ಲ ಅಂಶಗಳನ್ನು ವಿವರಿಸಿ ಅಲ್ಲಿಂದಲೇ ಒಪ್ಪಿಗೆ ಪಡೆದು ರಾಜ್ಯ ನಾಯಕರನ್ನು ಸುಮ್ಮನಾಗಿಸಲು ನಿರ್ಧರಿಸಿದ್ದಾರೆ. ಈ ಮೂಲಕ ರಾಜ್ಯದ ಕಾಂಗ್ರೆಸ್ ನಾಯಕರಿಗೂ ನಾನು ನೇರವಾಗಿ ಹೈಕಮಾಂಡ್ ಜತೆ ಮಾತನಾಡಬಲ್ಲೆ ಎಂಬ ಸಂದೇಶ ರವಾನಿಸುವುದು ಇದರ ಹಿಂದಿದೆ ಎಂದು ಹೇಳಲಾಗಿದೆ.
ಐದು ಯೋಜನೆಗೆ ಓಕೆಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ಮುಂದುವರಿಸಲು ಕುಮಾರಸ್ವಾಮಿ ಸಹ ಒಪ್ಪಿಸಿದ್ದಾರೆ. ಬಸ್ ಪಾಸ್ ವಿಚಾರದಲ್ಲಿ ಯೋಚಿಸಬೇಕು ಎಂದು ಹೇಳಿದ್ದಾರೆ. ಜೆಡಿಎಸ್‌ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಸಾಲ ಮನ್ನಾ, ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಬಡ ಮಹಿಳೆಯರಿಗೆ ಮಾಸಾಶನ, ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೊಸ ನೀತಿ, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀದಿ ಬದಿ ವ್ಯಾಪಾರಿಗಳಿಗೆ ಅಗ್ಗದ ದರದಲ್ಲಿ ವಸತಿ ಯೋಜನೆ ರೂಪಿಸುವುದು ಬಜೆಟ್‌ನಲ್ಲಿ ಸೇರಿಸಬೇಕು ಎಂಬುದು ಅವರ ಉದ್ದೇಶ. ಜುಲೈ ಮೊದಲ ವಾರ ಅಧಿವೇಶನ ನಡೆಯಲಿದ್ದು, ಹೊಸ ಬಜೆಟ್ ಮಂಡಿಸಲಿದ್ದೇನೆ. ಈಗಾಗಲೇ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ನಾನೂ ಇಲಾಖಾವಾರು ಅಧಿಕಾರಿಗಳ ಸಭೆಯನ್ನು ನಡೆಸಲಿದ್ದೇನೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಮತ್ತೂಂದು ಬಜೆಟ್ ಅನಗತ್ಯ: ಸಿದ್ದರಾಮಯ್ಯ
ಬೆಂಗಳೂರು:ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೂಂದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಂಡಿಸಿದ ಬಜೆಟ್‌ನಲ್ಲಿನ ಎಲ್ಲ ಘೋಷಣೆಗಳೂ ಮುಂದುವರೆಯುತ್ತವೆ. ಕುಮಾರಸ್ವಾಮಿ ಹೊಸದಾಗಿ ಯಾವುದಾದರೂ ಕಾರ್ಯಕ್ರಮ ಸೇರಿಸುವುದಾದರೆ ಪೂರಕ ಅಂದಾಜುಗಳಲ್ಲಿ ಸೇರಿಸಬಹುದು. ಜತೆಗೆ ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅದಕ್ಕಾಗಿ ಸಮಿತಿಯೂ ರಚನೆಯಾಗಿದೆ. ಹೀಗಾಗಿ, ಮತ್ತೂಂದು ಬಜೆಟ್‌ನ ಅಗತ್ಯ ಬರುವುದಿಲ್ಲ ಎಂದು ತಿಳಿಸಿದರು.