Advertisement

ಉಪ ಚುನಾವಣೆ: ಜಾತಿ, ಕುಟುಂಬಗಳ ಕಾರುಬಾರು

06:00 AM Oct 11, 2018 | Team Udayavani |

ಬೆಂಗಳೂರು: ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲೂ  ಜಾತಿ ಹಾಗೂ ಕುಟುಂಬ ಕೇಂದ್ರೀಕೃತ ಲೆಕ್ಕಾಚಾರಗಳೊಂದಿಗೆ ಅಭ್ಯರ್ಥಿಗಳ ಆಯ್ಕೆಗೆ ಮೂರೂ ಪಕ್ಷಗಳು ಒಲವು ತೋರಿರುವುದು ಸ್ಪಷ್ಟಗೊಂಡಿದೆ.

Advertisement

ರಾಮನಗರ ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರ, ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳು ಆಯ್ಕೆ ಮಾಡಿರುವ ಅಭ್ಯರ್ಥಿಗಳು ಹಾಗೂ ಕೇಳಿಬರುತ್ತಿರುವ ಅಭ್ಯರ್ಥಿಗಳನ್ನು ನೋಡಿದರೆ ಇದು ಸಾಬೀತಾಗಿದೆ.

ರಾಮನಗರ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಬೇರೆ ಸಮುದಾಯದವರಿಗೆ ಟಿಕೆಟ್‌ ಕೊಟ್ಟರೂ ಗೆಲ್ಲಬಹುದಾದರೂ ಅಲ್ಲಿ  ಜಾತಿ ಆಧಾರದಲ್ಲೇ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದಡಿ ರಾಮನಗರದಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲು ತೀರ್ಮಾನವಾಗಿದ್ದು ಅಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅನಿತಾ ಕುಮಾರಸ್ವಾಮಿಯವರಿಗೆ ಟಿಕೆಟ್‌ ಖಚಿತಪಡಿಸಲಾಗಿದೆ. ಇನ್ನು ಬಿಜೆಪಿ ಸಹ  ಪ್ರಬಲ ಒಕ್ಕಲಿಗ ಸಮುದಾಯದ ಅಭ್ಯರ್ಥಿಯ ತಲಾಷೆಯಲ್ಲಿದೆ.

ಮಂಡ್ಯ ಕ್ಷೇತ್ರದಲ್ಲೂ ಜೆಡಿಎಸ್‌ನಿಂದ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ. ಬಿಜೆಪಿ ಸಹ ಅದೇ ಸಮುದಾಯದ ಅಭ್ಯರ್ಥಿಯ ಹುಡುಕಾಟದಲ್ಲಿದೆ.

Advertisement

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸಿದೆ. ಲಿಂಗಾಯಿತ ಸಮುದಾಯಕ್ಕೆ ಸೇರಿರುವ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬ್ರಾಹ್ಮಣ, ಲಿಂಗಾಯಿತ ಮತದಾರರನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ  ಈಡಿಗ ಅಥವಾ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಚರ್ಚೆಗಳು ನಡೆದಿವೆ.

ಶಿವಮೊಗ್ಗದಲ್ಲಿ  ಬಂಗಾರಪ್ಪ ಅವರ ನಂತರ  ಈಡಿಗ ಸಮುದಾಯದ ಯಾವೊಬ್ಬರೂ ಲೋಕಸಭೆಗೆ  ಆಯ್ಕೆಯಾಗಿಲ್ಲ. ಬಂಗಾರಪ್ಪ ಅವರ ನಂತರ  ಈಡಿಗ ಸಮುದಾಯ ಬಿಜೆಪಿ ಮತಬ್ಯಾಂಕ್‌ ಆಗಿ ಪರಿವರ್ತನೆಗೊಂಡಿದೆ.  ಹೀಗಾಗಿ,  ಈಡಿಗ ಸಮುದಾಯವನ್ನು ಮತ್ತೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ತೆಕ್ಕೆಗೆ ತರಲು  ಈಡಿಗ ಅಭ್ಯರ್ಥಿಯತ್ತ ಎರಡೂ ಪಕ್ಷಗಳ ಚಿತ್ತ ನೆಟ್ಟಿದೆ. ಹೀಗಾಗಿ, ಕಾಂಗ್ರೆಸ್‌-ಜೆಡಿಎಸ್‌ ಕಾಮನ್‌ ಕ್ಯಾಂಡಿಡೇಟ್‌ ಆಗಿ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಸಮಾಲೋಚನೆ ನಡೆದಿವೆ. ಮಧು ಬಂಗಾರಪ್ಪ ಒಪ್ಪದಿದ್ದರೆ ಒಕ್ಕಲಿಗ ಸಮುದಾಯದ ಕಿಮ್ಮನೆ ರತ್ನಾಕರ್‌ ಸ್ಪರ್ಧೆಗೆ ಇಳಿಸುವ ಸಾಧ್ಯತೆಯಿದೆ. ಆಗಲೂ ಕ್ಷೇತ್ರದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟು ಆಯ್ಕೆ ನಡೆಯಲಿದೆ.

ಈಡಿಗ, ಮುಸ್ಲಿಂ, ಒಕ್ಕಲಿಗ ಕ್ಯಾಂಬಿನೇಷನ್‌ನಡಿ ಅಲ್ಲಿ ಯಡಿಯೂರಪ್ಪ ಪುತ್ರನನ್ನು ಸೋಲಿಸುವ ಕಾರ್ಯತಂತ್ರ ರೂಪಿಸಲಾಗಿದೆ.

ಬಳ್ಳಾರಿ ಲೋಕಸಭೆ ಕ್ಷೇತ್ರ ಎಸ್‌ಟಿಗೆ ಮೀಸಲಾಗಿದ್ದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಅದೇ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸುವುದು ಅನಿವಾರ್ಯ. ಜತೆಗೆ  ಆ ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯಿತ , ಮುಸ್ಲಿಂ, ಎಸ್‌ಸಿ ಸಮುದಾಯದ ಮೇಲೆ ಕ್ರಮವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಣ್ಣು ಹಾಯಿಸಿದೆ.ಇನ್ನು, ಜಮಖಂಡಿ ಕ್ಷೇತ್ರದಲ್ಲೂ ಲಿಂಗಾಯಿತ ಸಮುದಾಯಕ್ಕೆ ಕಾಂಗ್ರೆಸ್‌ ಮಣೆ ಹಾಕಿದ್ದು ಆನಂದ್‌ ನ್ಯಾಮಗೌಡ ಹೆಸರು ಅಂತಿಮಗೊಳಿಸಿದೆ. ಬಿಜೆಪಿ -ಆರ್‌ಎಸ್‌ಎಸ್‌ ಕಾರ್ಯತಂತ್ರದ ಭಾಗವಾಗಿ ಬ್ರಾಹ್ಮಣ ಸಮುದಾಯದ ಶ್ರೀಕಾಂತ್‌ ಕುಲಕರ್ಣಿ ಹೆಸರು ಶಿಫಾರಸು ಮಾಡಿದೆ.

ಹೀಗಾಗಿ, ಸಮ್ಮಿಶ್ರ ಸರ್ಕಾರದ ಸಾಧನೆ, ವೈಫ‌ಲ್ಯಗಳ ಆಧಾರದಲ್ಲಿ ಉಪ ಚುನಾವಣೆ ಎಂಬುದು ಮೇಲ್ನೋಟಕ್ಕೆ ಹೇಳಿದರೂ ಮೂರೂ ಪಕ್ಷಗಳು ಉಪ ಚುನಾವಣೆಯಲ್ಲೂ ಯಾವ್ಯಾವ ಸಮುದಾಯ ನಿರ್ಣಾಯಕ, ಎಷ್ಟು ಮತದಾರರನ್ನು ಹೊಂದಿದೆ ಎಂಬ ಜಾತಿ ಲೆಕ್ಕಾಚಾರದಲ್ಲೇ ಅಭ್ಯರ್ಥಿಗಳನ್ನು ಆಯ್ಕೆಗೆ ಮುಂದಾಗಿರುವುದು ಸ್ಪಷ್ಟ.

ಕುಟುಂಬ ರಾಜಕಾರಣ
ಎಚ್‌.ಡಿ.ಕುಮಾರಸ್ವಾಮಿಯಿಂದ ತೆರವಾದ ರಾಮನಗರ ಕ್ಷೇತ್ರಕ್ಕೆ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್‌ ತಮ್ಮಣ್ಣ ಕಣಕ್ಕಿಳಿಸಲು ಚರ್ಚೆ ನಡೆದಿದೆ.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪಗೆ ಟಿಕೆಟ್‌ ನೀಡಲು ಜೆಡಿಎಸ್‌ ಒಲವು ತೋರಿ ಕಾಂಗ್ರೆಸ್‌ ಬೆಂಬಲ ಬಯಸಿದೆ.

ಬಳ್ಳಾರಿಯಲ್ಲಿ ಬಿಜೆಪಿಯಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿರುವವರಲ್ಲಿ ಶ್ರೀರಾಮುಲು ಸಹೋದರಿ ಶಾಂತಾ ಹಾಗೂ ಬಾವಮೈದುನ ಕುಟುಂಬ ಸದಸ್ಯ ಸಣ್ಣ ಫ‌ಕೀರಪ್ಪ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪ್ರಯತ್ನಿಸುತ್ತಿರುವವರಲ್ಲಿ ಶಾಸಕ ನಾಗೇಂದ್ರ ಸಹೋದರ ಮುಂಚೂಣಿಯಲ್ಲಿದ್ದಾರೆ. ಜಮಖಂಡಿಯಲ್ಲೂ ಅನುಕಂಪದ ಲಾಭ ಪಡೆಯಲು ಸಿದ್ದುನ್ಯಾಮಗೌಡರ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

– ಎಸ್‌.ಲಕ್ಷ್ಮಿ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next