ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಹೆಸರು ಪ್ರಸ್ತಾಪವಾಗುತ್ತಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜೆಡಿಎಸ್ ಜತೆ ಮೈತ್ರಿ ಸರ್ಕಾರ ನಡೆಸುತ್ತಿರುವುದರಿಂದ ಲೋಕಸಭೆ ಚುನಾವಣೆಯನ್ನೂ ಜಂಟಿಯಾಗಿ ಎದುರಿಸಲು ನಿರ್ಧರಿಸಿರುವುದರಿಂದ ಸುಮಲತಾರಿಗೆ ಟಿಕೆಟ್ ಕೊಡಿಸುವುದಕ್ಕಿಂತ ಮೈತ್ರಿ ಉಳಿಸಿಕೊಳ್ಳುವ ಕಡೆಗೆ ರಾಜ್ಯ ನಾಯಕರು ಆಸಕ್ತಿ ವಹಿಸಿದ್ದಾರೆ.
ಜೆಡಿಎಸ್ ಈಗಾಗಲೇ ತನ್ನ ಪ್ರಭಾವ ಇರುವ ಕ್ಷೇತ್ರಗಳನ್ನು ತನಗೇ ಬಿಟ್ಟುಕೊಡಬೇಕು ಎನ್ನುವ ಸಂದೇಶವನ್ನು ಮೈತ್ರಿ ಪಕ್ಷ ಕಾಂಗ್ರೆಸ್‌ಗೆ ನೀಡಿದ್ದರಿಂದ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುವುದು ಕೈ ನಾಯಕರಿಗೆ ಸಮಸ್ಯೆಯಾಗಿದೆ. ಜೆಡಿಎಸ್ ಈಗಾಗಲೇ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ಚಿತ್ರನಟ ನಿಖೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಸಿದಟಛಿತೆ ನಡೆಸಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧಿಸಿದರೂ ಅವರಿಗೆ ಬೆಂಬಲಿಸದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮಂಡ್ಯದಲ್ಲಿ ಸುಮಲತಾ ಅವರಿಗೆ ಕಾಂಗ್ರೆಸ್ ಬೆಂಬಲಿಸಿದರೆ, ಕಾಂಗ್ರೆಸ್‌ನ ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಸಮಸ್ಯೆ ಮೈಮೇಲೆ ಎಳೆದುಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾರಿ ಅವರು ಪಕ್ಷೇತರರಾಗಿ ನಿಂತರೂ ಅಂತರ ಕಾಯ್ದುಕೊಳ್ಳಲು ಕೈ ನಾಯಕರು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ಕೈ ಟಿಕೆಟ್ ಅನುಮಾನ: ಸ್ವತಃ ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ ಮಂಡ್ಯದಿಂದಲೇ ಅದೂ ಕಾಂಗ್ರೆಸ್ ಪಕ್ಷದಿಂದ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರ ನಿಲುವು ಮಾತ್ರ ಅವರ ಅಭಿಲಾಷೆಗೆ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.
ಹಾಲಿ ಸಂಸದರ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟುಕೊಡಬಾರದೆಂದು ರಾಜ್ಯ ಕಾಂಗ್ರೆಸ್ ನಿರ್ಧರಿಸಿದ್ದು, ತಮ್ಮ ಅಭಿಪ್ರಾಯವನ್ನು ಹೈ ಕಮಾಂಡ್ ಗಮನಕ್ಕೂ ತಂದಿದ್ದಾರೆ.
ಹೀಗಾಗಿ ಜೆಡಿಎಸ್‌ನ ಹಾಲಿ ಸಂಸದರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳಿದರೆ, ಜೆಡಿಎಸ್ ಅದನ್ನೇ ಅಸOಉ ಮಾಡಿಕೊಂಡು ಕಾಂಗ್ರೆಸ್ ಹಾಲಿ ಸಂಸದರಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಪಟ್ಟು ಹಿಡಿಯಬಹುದು. ಹೀಗಾಗಿ ಮಂಡ್ಯ ವಿಚಾರವಾಗಿ ಮೌನ ವಹಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಜತೆಗೆ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳಬೇಕಿರುವುದರಿಂದ ಅವರ ಶಕ್ತಿ ಇರುವ ಕ್ಷೇತ್ರಗಳನ್ನು ಬಿಟ್ಟು ಕೊಡುವ ಪ್ರಸಂಗ ಬರಬಹುದು. ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರ ಕೇಳಿದರೆ ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ.ದೇವೇಗೌಡರ ಜೊತೆ ಚರ್ಚಿಸಿದ
ನಂತರ ಯಾವ ಕ್ಷೇತ್ರ ನಮಗೆ ಉಳಿಯುತ್ತದೆ ಎನ್ನುವುದು ನಿರ್ಧಾರವಾಗುತ್ತದೆ.
– ದಿನೇಶ್‌ಗುಂಡೂರಾವ್,
ಕೆಪಿಸಿಸಿ ಅಧ್ಯಕ್ಷ