Advertisement

ಮೈತ್ರಿ ಮಂತ್ರಕ್ಕೆ ಅಪಸ್ವರದ ಕಿಚ್ಚು

06:00 AM Oct 09, 2018 | Team Udayavani |

ಬೆಂಗಳೂರು: ಉಪಚುನಾವಣೆ ಗೆಲ್ಲಲು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌  ಕಾರ್ಯತಂತ್ರ ರೂಪಿಸುತ್ತಿರುವ ಬೆನ್ನಲ್ಲೇ, ಮೈತ್ರಿ ಸಂಬಂಧ ರಾಮನಗರ ಹಾಗೂ ಮಂಡ್ಯದಲ್ಲಿ ಅಪಸ್ವರ ಕೇಳಿಬಂದಿದೆ. 

Advertisement

ಜೆಡಿಎಸ್‌ ತೊರೆದು ಕಾಂಗ್ರೆಸ್‌ನಲ್ಲಿರುವ ಚೆಲುವರಾಯಸ್ವಾಮಿ, ಮಂಡ್ಯದಲ್ಲಿ ಅಭ್ಯರ್ಥಿ ಇಳಿಸಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.
“”ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ ಎಂದ ಮಾತ್ರಕ್ಕೆ ಅಭ್ಯರ್ಥಿ ಹಾಕಬಾರದು ಎಂದೇನಿಲ್ಲ. ಹಿಂದೆ ಒಂದೇ ಪಕ್ಷದ ಶಾಸಕರು ಜಿಲ್ಲೆಯಲ್ಲಿದ್ದಾಗಲೂ ಲೋಕಸಭೆಯಲ್ಲಿ ಬೇರೆ ಪಕ್ಷ ಗೆದ್ದ ಉದಾಹರಣೆಯಿದೆ” ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. 

ಅದೇ ರೀತಿ, ರಾಮನಗರದಲ್ಲೂ ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತಿದೆ ಎಂಬ ಕಾರಣಕ್ಕಾಗಿಯೇ ಅವರ ಪುತ್ರ ಚಂದ್ರಶೇಖರ್‌ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದು ಕಾಂಗ್ರೆಸ್‌ ನಾಯಕರಿಗೂ ತಲೆನೋವಾಗಿ ಪರಿಣಮಿಸಿದೆ.

ಸಮ್ಮಿಶ್ರ ಸರ್ಕಾರ ಇರುವುದರಿಂದ ಮೈತ್ರಿ ಅನಿವಾರ್ಯ. ಆದರೆ, ಅಪಸ್ವರ ಕೇಳಿಬಂದರೆ ಎಲ್ಲೋ ಒಂದು ಕಡೆ ಮುಂದಿನ ಲೋಕಸಭೆ ಚುನಾವಣೆಗೂ ಪರಿಣಾಮ ಬೀರಲಿದೆ ಎಂಬ ಆತಂಕ ಎರಡೂ ಪಕ್ಷಗಳ ನಾಯಕರದ್ದಾಗಿದೆ. ಹೀಗಾಗಿ, ಜಿಲ್ಲಾ ಮುಖಂಡರನ್ನು ಕರೆಸಿ ಮನವೊಲಿಸುವ ಕಸರತ್ತು ಸಹ ನಡೆಯುತ್ತಿದೆ.

ಬಳ್ಳಾರಿಗೆ ರಮೇಶ್‌?: ಈ  ಕ್ಷೇತ್ರದಲ್ಲಿ ಶ್ರೀರಾಮುಲು ಮಣಿಸಲು ಸಚಿವ ರಮೇಶ್‌ ಜಾರಕಿಹೊಳಿಗೆ ಹೊಣೆಗಾರಿಕೆ ನೀಡಬೇಕು. ಅವರನ್ನೇ ಸ್ಪರ್ಧೆಗೆ ಇಳಿಸುವುದು ಸೂಕ್ತ ಎಂಬ ಅಭಿಪ್ರಾಯ ಕಾಂಗ್ರೆಸ್‌ನ ಒಂದು ವಲಯದಲ್ಲಿ ಕೇಳಿಬರುತ್ತಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡುಗಿಸಿ ಜಾರಕಿಹೊಳಿ ಸಹೋದರರಿಗೆ ಬಳ್ಳಾರಿ ಲೋಕಸಭೆ ಚುನಾವಣೆ ಉಸ್ತುವಾರಿ ನೀಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಿ ಸಾಮರ್ಥ್ಯ ತೋರಿಸಲು ಹೇಳಬೇಕು ಎಂದು ಕೆಲವು ಮುಖಂಡರು ರಾಜ್ಯ ನಾಯಕರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.

Advertisement

ಸ್ಪರ್ಧೆಗೆ ಸಿದ್ಧ ಎಂದ ಕಿಮ್ಮನೆ :
ಶಿವಮೊಗ್ಗದಿಂದ ಕಾಂಗ್ರೆಸ್‌ ಪಕ್ಷ ಟಿಕೆಟ್‌ ಕೊಟ್ಟರೆ ಸ್ಪರ್ಧೆ ಮಾಡಲು ಸಿದ್ಧ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ. ಮತ್ತೂಂದೆಡೆ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ನಡುವೆ ಮೈತ್ರಿಯಾಗಿ ಶಿವಮೊಗ್ಗ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಕಿಮ್ಮನೆ ಸ್ಪರ್ಧೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಹೇಳಿದ್ದು ತಾನೂ ಆಕಾಂಕ್ಷಿ ಎಂಬ ಸಂದೇಶ ರವಾನಿಸಿದ್ದಾರೆ.  ಮಂಜುನಾಥ ಭಂಡಾರಿ , ಬೇಳೂರು ಗೋಪಾಲಕೃಷ್ಣ ಸಹ ಆಕಾಂಕ್ಷಿಯಾಗಿದ್ದಾರೆ.

ಸಿಂಧ್ಯಾ ಹೆಸರು ಚಾಲ್ತಿಗೆ
ಜೆಡಿಎಸ್‌ನಲ್ಲಿ ರಾಮನಗರ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಅಥವಾ ನಿಖೀಲ್‌ ಸ್ಪರ್ಧೆ ಖಚಿತವಾಗಿತ್ತಾದರೂ ಈಗ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ ಹೆಸರು ಚಾಲ್ತಿಯಲ್ಲಿದೆ. ಕುಟುಂಬ ರಾಜಕಾರಣ ಎಂಬ ಆರೋಪ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿ ಕಣಕ್ಕಿಳಿಸಬಹುದಾ ಎಂಬ ಚಿಂತನೆ ನಡೆದಿದೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಇನ್ನೂ ಅಭ್ಯರ್ಥಿ ಫೈನಲ್‌ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಮಂಡ್ಯ ಲೋಕಸಭೆ ಕ್ಷೇತ್ರಕ್ಕೂ ಶಿವರಾಮೇಗೌಡ, ಲಕ್ಷ್ಮಿ ಅಶ್ವಿ‌ನಿ ಜತೆಗೆ ಸಚಿವ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್‌ ತಮ್ಮಣ್ಣ ಹೆಸರು ಕೇಳಿಬರುತ್ತಿದೆ.

ಬಿಎಸ್‌ವೈ, ಶ್ರೀರಾಮುಲುಗೆ ಪ್ರತಿಷ್ಠೆ
ಬಿಜೆಪಿಯಲ್ಲಿ ರಾಮನಗರಕ್ಕೆ ರುದ್ರೇಶ್‌ ಅಥವಾ ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್‌, ಜಮಖಂಡಿಗೆ ಶ್ರೀಕಾಂತ್‌ ಕುಲಕರ್ಣಿ ಅಥವಾ ಸಂಗಮೇಶ್‌ ನಿರಾಣಿ ಸ್ಪರ್ಧೆ ಖಚಿತ. ಇನ್ನು ಶಿವಮೊಗ್ಗಕ್ಕೆ ಬಿ.ವೈ.ರಾಘವೇಂದ್ರ ಘೋಷಣೆಯಾಗಿದೆ. ಮಂಡ್ಯ ಹಾಗೂ ಬಳ್ಳಾರಿಗೆ ಅಭ್ಯರ್ಥಿಗಳ ತಲಾಷೆ ಮಾಡಲಾಗುತ್ತಿದ್ದು, ಬಳ್ಳಾರಿಯಲ್ಲಿ ಶ್ರೀರಾಮುಲು ಸೂಚಿಸಿದವರು ಅಭ್ಯರ್ಥಿಯಾಗಲಿದ್ದಾರೆ. ಸಣ್ಣ ಫ‌ಕೀರಪ್ಪ, ಶಾಂತಾ, ಎನ್‌.ವೈ.ಹನುಮಂತಪ್ಪ ಕುಟುಂಬದವರಲ್ಲಿ ಒಬ್ಬರು ಸ್ಪರ್ಧೆಗೆ ಇಳಿಯಯಲಿದ್ದಾರೆ. ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಸೇರಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಪಕ್ಷದಿಂದ ನಾಯಕರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಆದರೆ, ಅಲ್ಲಿ ಬಿಜೆಪಿಗೆ ಬರಲು ಯಾರೂ ಧೈರ್ಯ ಮಾಡುತ್ತಿಲ್ಲ ಎನ್ನಲಾಗಿದೆ. ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರಗಳ ವಿಚಾರದಲ್ಲಂತೂ ಯಡಿಯೂರಪ್ಪ ಹಾಗೂ ಶ್ರೀರಾಮುಲುಗೆ ಪ್ರತಿಷ್ಠೆಯಾಗಿದ್ದು , ಇಬ್ಬರಿಗೂ ಅವರವರ ಕ್ಷೇತ್ರಗಳ ಹೊಣೆಗಾರಿಕೆ ವಹಿಸಿಕೊಳ್ಳಬೇಕಿದೆ.

ಬಿರುಸಿನ ಕಾರ್ಯತಂತ್ರ: ಮೂರೂ ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಕಾರ್ಯತಂತ್ರ ರೂಪಿಸುವಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿ ನಿರತವಾಗಿದೆ.

ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮಂಗಳವಾರ ನಗರಕ್ಕೆ ಆಗಮಿಸಲಿದ್ದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮಂಗಳವಾರ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಜತೆ ಚರ್ಚಿಸಲಿದ್ದಾರೆ.ಮತ್ತೂಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಮುಖಂಡರ ಸಭೆ ಕರೆದಿದ್ದು ಬುಧವಾರದ ಕೋರ್‌ ಕಮಿಟಿಯಲ್ಲಿ ಅಭ್ಯರ್ಥಿಗಳು ಫೈನಲ್‌ ಆಗುವ ಸಾಧ್ಯತೆಯಿದೆ. ಹೀಗಾಗಿ, ಬುಧವಾರದೊಳಗೆ ಉಪ ಚುನಾವಣೆ ಅಖಾಡ ಪ್ರವೇಶಿಸುವ ಅಭ್ಯರ್ಥಿಗಳ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next