Advertisement

ಸರಕಾರಕ್ಕೆ ಅವಿಶ್ವಾಸದ ಗುಮ್ಮ ;  ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಅವಿಶ್ವಾಸದ ಆಟ

03:17 AM Sep 25, 2020 | Hari Prasad |

ಬೆಂಗಳೂರು: ಶಾಂತವಾಗಿದ್ದ ರಾಜ್ಯ ರಾಜಕೀಯದಲ್ಲಿ ದಿಢೀರನೇ ‘ಅವಿಶ್ವಾಸ’ದ ಗಾಳಿ ಬೀಸಿದೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರಕಾರ ‘ವಿಶ್ವಾಸ’ ಕಳೆದುಕೊಂಡಿದೆ ಎಂದು ಆರೋಪಿಸಿರುವ ವಿಪಕ್ಷ ಕಾಂಗ್ರೆಸ್‌ ವಿಧಾನಸಭೆಯಲ್ಲಿ  ಅವಿಶ್ವಾಸ ನಿರ್ಣಯ ಮಂಡಿಸಿದೆ.

Advertisement

ಕೋವಿಡ್ 19 ಸೋಂಕು ಹೆಚ್ಚುತ್ತಿರುವ ಮಧ್ಯೆ ಹಾಗೂ ಮುಂಗಾರು ಅಧಿವೇಶನ ಅಂತ್ಯವಾಗಲು 2 ದಿನ ಬಾಕಿ ಇರುವಂತೆ ಈ ವಿದ್ಯಮಾನ ಕುತೂಹಲ ಮೂಡಿಸಿದೆ. ವಿಶೇಷವೆಂದರೆ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ಕೋರಿಕೆಯನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಗೀಕರಿಸಿದ್ದು, ಅಧಿಕೃತ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ.

ಶಾಸಕಾಂಗ ಸಭೆಯಲ್ಲಿ ನಿರ್ಧಾರ
ಗುರುವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ನಿರ್ಧರಿಸಲಾಗಿತ್ತು. ಕಲಾಪ ಆರಂಭಗೊಂಡ ಅನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ಮಂಡನೆಗೆ ಅವಕಾಶ ಕೋರಿದರು. ಇದಕ್ಕೆ ಸ್ಪಂದಿಸಿದ ಸ್ಪೀಕರ್‌, ನಿರ್ಣಯದ ಪರವಾಗಿರುವವರು ಎದ್ದು ನಿಂತು ಬೆಂಬಲ ಸೂಚಿಸುವಂತೆ ಕೋರಿದರು. ಆಗ  ಕಾಂಗ್ರೆಸ್‌ ಸದಸ್ಯರೆಲ್ಲರೂ ಎದ್ದು ನಿಂತರು. ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ರೂಲಿಂಗ್‌ ನೀಡಿದರು.

ರಾಜ್ಯ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವುದರಿಂದ ಸರಕಾರ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳುವಂತಿಲ್ಲ. ಮಹತ್ವದ ಮಸೂದೆಗಳ ಮಂಡನೆಗೆ ಅವಕಾಶ ಕಲ್ಪಿಸಬಾರದು ಎಂದು ಕಾಂಗ್ರೆಸ್‌ ಸದಸ್ಯ ಎಚ್‌.ಕೆ. ಪಾಟೀಲ್‌ ಆಗ್ರಹಿಸಿದರು. ಆದರೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅದು ನಿಮ್ಮ ಅಭಿಪ್ರಾಯ. ಸರಕಾರಕ್ಕೆ ಬಹುಮತ ಇದೆ ಎಂದು ಆಡಳಿತ ಪಕ್ಷದ ಸದಸ್ಯರು ಹೇಳುತ್ತಿದ್ದಾರೆ. ಹೀಗಾಗಿ ಯಾವುದೇ ಕಾರ್ಯ ಕಲಾಪ ತಡೆಯಲು ಆಗದು ಎಂದರು.

ಇಂದು ಬಿಜೆಪಿ ಶಾಸಕಾಂಗ ಸಭೆ
ವಿಧಾನಮಂಡಲ ಅಧಿವೇಶನ ಮುಕ್ತಾಯಕ್ಕೆ ಒಂದು ದಿನ ಬಾಕಿ ಇರುವಂತೆ ಶುಕ್ರವಾರ ಸಂಜೆ ಬಿಜೆಪಿ ಶಾಸಕಾಂಗ ಸಭೆ ಕರೆದಿದೆ. ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್‌ ಹೊಟೇಲ್‌ನಲ್ಲಿ ಸಂಜೆ 7 ಗಂಟೆಗೆ ಶಾಸಕಾಂಗ ಸಭೆ ನಿಗದಿಯಾಗಿದೆ.

Advertisement

ಅವಿಶ್ವಾಸದ ಹಿಂದಿನ ಕೈ ತಂತ್ರ
– ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ದಾಖಲಿಸುವುದು.

– ಸಾರ್ವಜನಿಕ ವಲಯದಲ್ಲಿ ರಾಜ್ಯ ಸರಕಾರದ ವರ್ಚಸ್ಸಿಗೆ ಧಕ್ಕೆ ತರುವುದು.

– ಯಡಿಯೂರಪ್ಪ ಕುಟುಂಬದವರ ಹಸ್ತಕ್ಷೇಪ ನಡೆಯುತ್ತಿದೆ ಎನ್ನುವುದನ್ನು ಬಿಂಬಿಸುವುದು.

– ಸರಕಾರದ ಭ್ರಷ್ಟಾಚಾರ ವಿಷಯವನ್ನೇ ಉಪ ಚುನಾವಣೆ ಅಸ್ತ್ರವನ್ನಾಗಿ ಮಾಡುವುದು.


ಜೆಡಿಎಸ್‌ ಏನು ಮಾಡಬಹುದು?
– ಅವಿಶ್ವಾಸ ನಿರ್ಣಯಕ್ಕೆ ಮುನ್ನ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ನಾಯಕರ ಸಂಪರ್ಕ ಮಾಡಿಲ್ಲ.

– ಈ ವಿಷಯ ಜೆಡಿಎಸ್‌ ನಾಯಕರಿಗೆ ಇರಿಸು ಮುರಿಸು ಮಾಡಿರಬಹುದು

– ಸದನದಲ್ಲಿಯೂ ಕಾಂಗ್ರೆಸ್‌ ನಾಯಕರ ಜತೆಯಲ್ಲಿ ಜೆಡಿಎಸ್‌ ನಿಂತಿಲ್ಲ.

– ಬಿಜೆಪಿ ವಿರುದ್ಧವೂ ಜೆಡಿಎಸ್‌ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿಲ್ಲ.

ಒಂದು ವರ್ಷದ ಅವಧಿಯಲ್ಲಿ  ಯಾವ ಸರಕಾರಗಳೂ ಇಷ್ಟೊಂದು ದುರಾಡಳಿತ ಮಾಡಿಲ್ಲ. ಪ್ರತಿ ಹಂತದಲ್ಲೂ ಸರಕಾರ ವಿಫ‌ಲವಾಗಿದೆ. ಈ ಬಗ್ಗೆ ಚರ್ಚಿಸಲು ಅಧಿವೇಶನದಲ್ಲಿ ಅವಕಾಶ ನೀಡಲಿಲ್ಲ. ನಮ್ಮ ಶಾಸಕರು 1,600 ಪ್ರಶ್ನೆ ಸಲ್ಲಿಸಿದರೆ ಒಂದಕ್ಕೂ ಉತ್ತರ ನೀಡಿಲ್ಲ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next