Advertisement

ಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಿಜೆಪಿ ಬಲಾಬಲ ಪರೀಕ್ಷೆ

11:28 AM Mar 17, 2018 | Team Udayavani |

ಬೆಂಗಳೂರು: ನಗರದ ಗಡಿ ಪ್ರದೇಶವಾಗಿರುವ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ವಲಸಿಗರ ಪ್ರಾಬಲ್ಯ ಜೋರಾಗಿದ್ದು, ಎಲ್ಲ ವರ್ಗಗಳನ್ನು ಒಳಗೊಂಡ ವೈವಿಧ್ಯಮಯ ಕ್ಷೇತ್ರವಾಗುವುದರೊಂದಿಗೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

Advertisement

ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ ವರ್ತೂರು ಕ್ಷೇತ್ರದಿಂದ ಬೇರ್ಪಟ್ಟ ಕೆ.ಆರ್‌.ಪುರ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ರಚನೆಯಾಯಿತು. ರಾಷ್ಟ್ರೀಯ ಹೆದ್ದಾರಿ, ಹೊರ ವರ್ತುಲ ರಸ್ತೆಗಳನ್ನು ಒಳಗೊಂಡಿದ್ದರೂ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಕ್ಷೇತ್ರ ಇದಾಗಿದೆ. 2013ರ ಚುನಾವಣೆಯಲ್ಲಿ ಭೈರತಿ ಬಸವರಾಜು ಗೆಲುವಿನ ನಗೆ ಬೀರಿದ್ದರು.

ಈ ಬಾರಿಯೂ ಎರಡನೇ ಅವಧಿಗೆ ಆಯ್ಕೆ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬೃಹತ್‌ ಸಮಾವೇಶಗಳನ್ನು ಆಯೋಜಿಸಿ ಮುಖ್ಯಮಂತ್ರಿಗಳನ್ನು ಕರೆತಂದು ಶಕ್ತಿ ಪ್ರದರ್ಶನ ಮಾಡುವ ಮೂಲಕ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಳ್ಳುತ್ತಿರುವ ನಂದೀಶ್‌ ರೆಡ್ಡಿ ಅವರು ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕಾಪಾಡಿಕೊಳ್ಳಲು ಕಳೆದ ಕೆಲ ತಿಂಗಳುಗಳಿಂದ ಕ್ಷೇತ್ರ ಸುತ್ತುವ ಕೆಲಸದಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಅವರ ಆಪ್ತರಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳಲಾಗುತ್ತಿದೆ. ಆದರೆ, ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ. ರಾಮಮೂರ್ತಿ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಕೆಲ ರಸ್ತೆಗಳಿಗೆ ಡಾಂಬರೀಕರಣ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಹೊರತುಪಡಿಸಿದರೆ,

ಕ್ಷೇತ್ರದ ಪ್ರಮುಖ ರಸ್ತೆಗಳ ವಾಹನ ದಟ್ಟಣೆ, ಪ್ರವಾಹ ಭೀತಿ, ರಾಜಕಾಲುವೆಗಳ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ಸಿಕ್ಕಿಲ್ಲ ಎಂಬ ಆರೋಪಗಳಿಂದ ಮುಕ್ತವಾಗಿಲ್ಲ. ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 9 ವಾರ್ಡ್‌ಗಳ ಪೈಕಿ 6 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಪಾಲಿಕೆ ಸದಸ್ಯರಿದ್ದು, ಉಳಿದ ಮೂರು ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ.

Advertisement

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಪಾಲಿಕೆ ಸಭೆಗೆ ಗೈರಾಗುತ್ತಿರುವ ಸದಸ್ಯರು ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಪಕ್ಷಕ್ಕೆ ಲಾಭವಾಗಲಿದೆ. ಇನ್ನು ನಂದೀಶ್‌ ರೆಡ್ಡಿ ಅವರು ಕ್ಷೇತ್ರದಲ್ಲಿ ಮತ್ತೆ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಶತ ಪ್ರಯತ್ನದಲ್ಲಿದ್ದು, ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೊತ್ತು ನೀಡಿದ್ದಾರೆ.

ಹಿಂದಿನ ಫ‌ಲಿತಾಂಶ
-ಬಿ.ಎ.ಬಸವರಾಜು (ಕಾಂಗ್ರೆಸ್‌) 1,06,299 
-ಎನ್‌.ಎಸ್‌.ನಂದೀಶ್‌ರೆಡ್ಡಿ (ಬಿಜೆಪಿ)  82,298 
-ಜೆ.ರವಿಪ್ರಕಾಶ್‌ (ಜೆಡಿಎಸ್‌) 3,955 

ಕ್ಷೇತ್ರದ ಬೆಸ್ಟ್‌ ಏನು?: ರಾಮಮೂರ್ತಿ ನಗರ ಜಂಕ್ಷನ್‌ನಲ್ಲಿ ಶಿಥಿಲಗೊಂಡ ಹಾಗೂ ಕಿರಿದಾದ ರೈಲ್ವೆ ಮೇಲ್ಸೇತುವೆಯಿಂದ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ನಿವಾರಣೆಗೆ ಹೊಸ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಕ್ಷೇತ್ರದ ಬಹುತೇಕ ಭಾಗಗಳಿಗೆ ಕಾವೇರಿ ನೀರಿನ ಪೂರೈಕೆಯನ್ನು ವಿಸ್ತರಿಸಿದ್ದು, 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ.

ಜತೆಗೆ ಆರ್ಥಿಕವಾಗಿ ಹಿಂದುಳಿದ 600 ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಕೆ.ಆರ್‌.ಪುರ ಹಾಗೂ ಕಸ್ತೂರಿ ನಗರ ಬಳಿ ಸ್ಕೈವಾಕ್‌ಗಳ ನಿರ್ಮಾಣ, ಹೊರಮಾವು, ಅಗರ, ವಿಭೂತಿಪುರ, ಬೆನ್ನಿಗಾನಹಳ್ಳಿ, ಗಂಗಶೆಟ್ಟಿ ಚಿಕ್ಕದೇವಸಂದ್ರ, ಕೌದೇನಹಳ್ಳಿ ಕೆರೆಗಳ ಅಭಿವೃದ್ಧಿಗೆ ಕ್ರಮ, ಬಾಬುಸಪಾಳ್ಯ, ಟಿ.ಸಿ.ಪಾಳ್ಯ, ಎಚ್‌ಎಎಲ್‌ ಭಾಗಗಳಲ್ಲಿ ನೂತನ ಉದ್ಯಾನಗಳ ನಿರ್ಮಾಣ ಗಮನಾರ್ಹ.

ಶಾಸಕರು ಏನಂತಾರೆ?
ಸಾಕಷ್ಟು ಹಿಂದುಳಿದಿದ್ದ ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿರುವ ಖುಷಿಯಿದೆ. ಹಳೇ ಮದ್ರಾಸ್‌ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿದೆ. ದಟ್ಟಣೆ ನಿವಾರಣೆಗೆ ಬೆನ್ನಿಗಾನಹಳ್ಳಿಯಿಂದ ಮೇಡಹಳ್ಳಿವರೆಗೆ ಮೇಲ್ಸೇತುವೆ ನಿರ್ಮಿಸಬೇಕಿದೆ. ಅದಕ್ಕೆ ಸಾವಿರ ಕೋಟಿ ಅಗತ್ಯವಿದೆ. ಅದರ ನಡುವೆಯೂ ವಾಹನ ದಟ್ಟಣೆ ನಿವಾರಣೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಬಿ.ಎ.ಬಸವರಾಜು

ಕ್ಷೇತ್ರದ ದೊಡ್ಡ ಸಮಸ್ಯೆ?: ಹಳೇ ಮದ್ರಾಸ್‌ ರಸ್ತೆಯ ಟಿನ್‌ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಆಗಿಲ್ಲ. ಇದೀಗ ಮೇಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಇದರೊಂದಿಗೆ ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಕುಡಿಯುವ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈವರೆಗೆ ಸಾಧ್ಯವಾಗಿಲ್ಲ. ಜತೆಗೆ ಅಗರ ಮತ್ತು ಕಗ್ಗದಾಸಪುರ ರೈಲ್ವೆ ಕೆಳಸೇತುವೆಗಳ ನಿರ್ಮಾಣ ಪೂರ್ಣವಾಗಿಲ್ಲ. ಇಂದಿಗೂ ಮಳೆ ಬಂದಾಗ ಕ್ಷೇತ್ರದ ಹಲವಾರು ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿದ್ದು, ರಾಜಕಾಲುವೆಗಳ ನಿರ್ಮಾಣಕ್ಕೆ ಆದ್ಯತೆ ಸಿಕ್ಕಿಲ್ಲ.

ಕ್ಷೇತ್ರದ ಮಹಿಮೆ: ಎಚ್‌ಎಎಲ್‌ ವಿಮಾನ ನಿಲ್ದಾಣ, ಟಿನ್‌ ಫ್ಯಾಕ್ಟರಿ ಜಂಕ್ಷನ್‌ನಲ್ಲಿರುವ ತೂಗು ಮೇಲ್ಸೇತುವೆ ಕೆ.ಆರ್‌.ಪುರದ ಹೆಗ್ಗುರುತುಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯೂ ಕ್ಷೇತ್ರದಲ್ಲಿ ಹಾದು ಹೋಗಿದೆ. ಸುತ್ತಮುತ್ತಲ ಪ್ರದೇಶಗಳಿಗೆ ಕೆ.ಆರ್‌.ಪುರ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಆನ್‌ಲೈನ್‌ ವ್ಯಾಪಾರ ಯುಗದಲ್ಲಿಯೂ ಪ್ರತಿ ಮಂಗಳವಾರ ಕೆ.ಆರ್‌.ಪುರ ಮೈದಾನದಲ್ಲಿ ಸಂತೆ ನಡೆಯುವುದು ವಿಶೇಷ.

ಆಕಾಂಕ್ಷಿಗಳು
-ಕಾಂಗ್ರೆಸ್‌- ಬಿ.ಎ.ಬಸವರಾಜು
-ಬಿಜೆಪಿ- ನಂದೀಶ್‌ ರೆಡ್ಡಿ
-ಜೆಡಿಎಸ್‌- ವಿ.ಕೆ. ಗೋಪಾಲ್‌

ಕುಡಿಯುವ ನೀರಿನ ಸಮಸ್ಯೆಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಶಾಲೆ, ಕಾಲೇಜುಗಳ ಬಳಿ ಪುಂಡರ ಹಾವಳಿ ತಪ್ಪಿಸಲು ಈಗ ಗಸ್ತು ಪೋಲಿಸರು ಕಡ್ಡಾಯವಾಗಿ ಇರುತ್ತಾರೆನ್ನುವುದು ಸಮಾಧಾನದ ಸಂಗತಿ.
-ವೀಣಾ

ಐಟಿಐ ಬಸ್‌ ನಿಲ್ದಾಣ ಹಾಗೂ ಕೆ.ಆರ್‌.ಪುರ ಬಸ್‌ ತಂಗುದಾಣಗಳ ಬಳಿ ರಸ್ತೆ ವಿಭಜಕ ಅಳವಡಿಸಿ, ಅನಗತ್ಯ ದಟ್ಟಣೆ ನಿಯಂತ್ರಿಸಲಾಗಿದೆ. ದೇವಸಂದ್ರಕ್ಕೆ ಉದ್ಯಾನವನ, ಆಟದ ಮೈದಾನದ ಅಗತ್ಯವಿದೆ. ಸ್ವತ್ಛತೆಗೆ ಆದ್ಯತೆ ನೀಡಬೇಕಿದೆ.
-ರೋಷನ್‌

ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಏನಾಗಿಲ್ಲ. ಬಸವನಪುರ ರಸ್ತೆಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಕೋರಿಕೆಗೆ ಸ್ಪಂದನೆ ದೊರೆತಿಲ್ಲ. ಪ್ರಯತ್ನಿಸಿದರೆ ಶಾಸಕರು ಸಿಗುತ್ತಾರೆ. ಬಸವನಪುರ ಪಾಲಿಕೆ ಸದಸ್ಯರು ಸಿಗುವುದಿಲ್ಲ.
-ಬಸವರಾಜು

ಕುಡಿಯುವ ನೀರಿನ ಸಮಸ್ಯೆ ಹೊರತುಪಡಿಸಿದರೆ ಉಳಿದಂತೆ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ನಾಗರಿಕರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಾರೆ. ಆದರೆ, ನಾರಾಯಣಪುರದಲ್ಲಿ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. 
-ವಿ.ಲಕ್ಷ್ಮೀ

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next