ಮುಧೋಳ: ಐದು ವರ್ಷದ ಅವಧಿ ಯಲ್ಲಿ ಬಿಜೆಪಿಯವರು ತಾವು ನೀಡಿದ ಪ್ರಣಾಳಿಕೆಯಂತೆ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಸಾಧ್ಯವಾದರೆ 5 ವರ್ಷದ ಸಾಧನಾ ಪಟ್ಟಿ ಬಿಡುಗಡೆ ಮಾಡಲಿ ಎಂದು ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪೂರ ಸವಾಲು ಹಾಕಿದರು.
ನಗರದ ಜಡಗಣ್ಣ ಬಾಲಣ್ಣ ವೃತ್ತದಿಂದ, ಗಾಂಧಿ ವೃತ್ತದ ಮೂಲಕ ಶಿವಾಜಿ ವೃತ್ತದವರೆಗೆ ಬೃಹತ್ ಮೆರವಣಿಗೆ ಮೂಲಕ ರೋಡ್ ಶೋ ನಡೆಸಿದ ನಂತರ ನಗರದ ಶಿವಾಜಿ ಸರ್ಕಲ್ನಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಕೇವಲ ಜಾತಿ ಆಧಾರದ ಮೇಲೆ ರಾಜಕಾರಣ ನಡೆಸುತ್ತಿರುವ ಬಿಜೆಪಿಗೆ ಹೇಳಿಕೊಳ್ಳುವಂತಹ ಯಾವುದೇ ಸಾಧನೆಗಳಿಲ್ಲ. ದೇಶದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಮಾಡದ ಬಿಜೆಪಿ ಜನರಿಗೆ ಕೇವಲ ಸುಳ್ಳು ಹೇಳುತ್ತಿದೆ. ಬಿಜೆಪಿ ಬಡವರಿಗೆ, ರೈತರಿಗೆ, ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದಾರೆ ಎಂದು ಹರಿಹಾಯ್ದರು. ಕರ್ನಾಟಕದಲ್ಲಿ ಬಡವರ, ಹಿಂದುಳಿದ ವರ್ಗಗಳ ಪರ ಭಾಗ್ಯಗಳನ್ನು ನೀಡಿದ್ದರೆ ಅದು ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರು ಮಾತ್ರ ಎಂದು ಹೇಳಿದರು.
ಲೋಕಸಭೆ ಚುನಾವಣಾ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ನಾನು ನಿಮ್ಮ ಮನೆಯ ಮಗಳು. ಮಗಳು ಮನೆಗೆ ಬಂದಾಗ ಉಡಿ ತುಂಬುವ ಸಂಪ್ರದಾಯದಂತೆ ಇಂದು ನಿಮ್ಮ ಮನೆಗೆ ಬಂದಿರುವ ನನಗೆ ವೋಟ್ ಮುಖಾಂತರ ಉಡಿ ತುಂಬಿ ಕಳುಹಿಸಬೇಕು. ನಿಮ್ಮೆಲ್ಲರ ಧ್ವನಿಯಾಗಿ ಲೋಕಸಭೆಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಜಿಲ್ಲೆಯ ಸಮಸ್ಯೆಗಳ ನಿವಾರಣೆಗಾಗಿ ಕಂಕಣ ತೊಟ್ಟು ಕಾರ್ಯ ನಿರ್ವಹಿಸುತ್ತೇನೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರಿಗೆ ಮತ ನೀಡ ಬೇಕೆಂದು ವಿನಂತಿಸಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಜಯ ನಾಯಕ, ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ, ಸತೀಶ ಬಂಡಿವಡ್ಡರ, ಪ್ರಮುಖರಾದ ಬಸವಂತ ಕಾಟೆ, ಎಚ್.ಎ.ಕಡಪಟ್ಟಿ, ಕೆ.ಆರ್. ಪಾಟೀಲ, ದಾನೇಶ ತಡಸಲೂರ, ಶಿವಾನಂದ ಕತ್ತಿ, ಅಂಬಿ, ಮಹಾನಿಂಗ ಕುರಿ, ಸತೀಶ ಗಾಡಿ, ಕಲ್ಮೇಶ ಸಾರವಾಡ, ಹನಮಂತ ಸಾವಂತ್ರಿ, ಹನಮಂತ ನಬಾಬ, ಸಂಗಪ್ಪ ನಾಗರಡ್ಡಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.