Advertisement

ಕಾಗವಾಡದಲ್ಲಿ ಕಾಂಗ್ರೆಸ್‌ನದ್ದೇ ಕಾರುಬಾರು

01:15 PM May 10, 2019 | Team Udayavani |

ಚಿಕ್ಕೋಡಿ: ಕೃಷ್ಣಾ ನದಿ ತಟದಲ್ಲಿರುವ ಕಾಗವಾಡ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಅಧಿಪತ್ಯ ಸಾಧಿಸಿದೆ. ಇದೀಗ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಪರ ಅಲೆಯಲ್ಲಿ ಬಿಜೆಪಿ ಮಂಕಾಗಿದೆ.

Advertisement

ಹೀಗಾಗಿ ಕಾಂಗ್ರೆಸ್‌ಗೆ ಭಾರಿ ಲೀಡ್‌ ಬರುವ ನಿರೀಕ್ಷೆಯಿದ್ದು, ಬಿಜೆಪಿ ತೀವ್ರ ಪೈಪೋಟಿ ನೀಡುವ ಲಕ್ಷಣ ಅಲ್ಲಗಳೆಯುವಂತಿಲ್ಲ ಎಂಬುದು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿರುವ ಜನರ ಅಭಿಪ್ರಾಯ.

ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಕಾಗವಾಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಏಳು ಸಾವಿರ ಮತಗಳ ಮುನ್ನಡೆ ಪಡೆದುಕೊಂಡಿದ್ದರು. 2018ರ ವಿಧಾನಸಭೆ ಚುನಾವನೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮಂತ ಪಾಟೀಲ 33 ಸಾವಿರ ಮತಗಳ ಅಂತರದಲ್ಲಿ ಆಯ್ಕೆಯಾಗಿ ಶಾಸಕರಾದರು. ಇದೀಗ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ 15 ರಿಂದ 18 ಸಾವಿರ ಮತಗಳ ಮುನ್ನಡೆ ಬರುವ ನಿರೀಕ್ಷೆ ಕಾಂಗ್ರೆಸ್‌ ಪಾಳೆಯದಲ್ಲಿದೆ. ಬಿಜೆಪಿ ಕೂಡಾ ಕಾಂಗ್ರೆಸ್‌ ಸರಿಸಮನಾಗಿ ಮತ ಪಡೆಯಲು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಬಿಜೆಪಿ ಕಾರ್ಯಕರ್ತರಲ್ಲಿದೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಹೊಳೆ: ಚಿಕ್ಕೋಡಿ-ಸದಲಗಾ ಕ್ಷೇತ್ರದ ಮಾದರಿಯಲ್ಲಿ ಕಾಗವಾಡ ಕ್ಷೇತ್ರದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಜನರ ಹೇಳಿಕೆ. ಕಳೆದ ಐದು ವರ್ಷದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾಗವಾಡ ಕ್ಷೇತ್ರಕ್ಕೆ 1500 ರಿಂದ 1600 ಕೋಟಿ ಅನುದಾನ ಒದಗಿ ಬಂದಿದೆ. ಅದರಲ್ಲಿ ಸಂಸದ ಪ್ರಕಾಶ ಹುಕ್ಕೇರಿ ವೈಯಕ್ತಿಕವಾಗಿ 180 ಕೋಟಿ ರೂ. ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಭಾರಿ ಲೀಡ್‌ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು.

Advertisement

ಕೃಷ್ಣಾ ನದಿ ಪಾತ್ರದಲ್ಲಿರುವ ಜೂಗಳ, ಮಂಗಾವತಿ, ಶಿರಗುಪ್ಪಿ, ಉಗಾರ, ಶೇಡಬಾಳ, ಐನಾಪುರ, ಕೃಷ್ಣಾ ಕಿತ್ತೂರ, ಮಳವಾಡ ಮುಂತಾದ ಗ್ರಾಮಗಳ ಜನರು ಕಾಂಗ್ರೆಸ್‌ಗೆ ಮುನ್ನಡೆ ನೀಡಲಿದ್ದಾರೆ. ಇನ್ನುಳಿದ 1360 ಕೋಟಿ ರೂ ವೆಚ್ಚದಲ್ಲಿ ಮಂಜೂರಾದ ಬಸವೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಹಳ್ಳಿಯ ಜನರು ಕಾಂಗ್ರೆಸ್‌ಗೆ ಭಾರಿ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ. ಹೀಗಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿಯೂ ಕೂಡಾ ಕಾಂಗ್ರೆಸ್‌ ಪರವಾದ ಮಾತುಗಳು ಎಲ್ಲೆಡೆ ಚರ್ಚೆಯಲ್ಲಿದೆ.

ಮಂಕಾದ ಬಿಜೆಪಿ: ಕಾಂಗ್ರೆಸ್‌ ಕಳೆದ ಐದು ವರ್ಷದಲ್ಲಿ ಕಾಗವಾಡ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಕ್ಷೇತ್ರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನ, ಗುಣಮಟ್ಟದ ರಸ್ತೆಗಳು, ಕೃಷ್ಣಾ ನದಿಗೆ ಜೂಗಳ-ಕೇದರಾಪುರ ಸೇತುವೆ ನಿರ್ಮಾಣ, ಮಳವಾಡ-ಚಿಂಚಲಿ ಸೇತುವೆ, ಉಗಾರ ಸೇತುವೆ ಮೇಲ್ದರ್ಜೆಗೆ ಏರಿಸುವುದು ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿರುವ ಪರಿಣಾಮ ಕಾಂಗ್ರೆಸ್‌ಗೆ ಮುನ್ನಡೆ ಬರಲಿದೆ ಎನ್ನುತ್ತಾರೆ ಕ್ಷೇತ್ರದ ಮತದಾರರು.

ಮೋದಿಗೆ ಬೆಂಬಲ: ದೇಶದ ಸುರಕ್ಷತೆ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂದು ಕ್ಷೇತ್ರದ ಪ್ರಜ್ಞಾವಂತರ ಮತದಾರರು ಮೋದಿಗೆ ಬೆಂಬಲ ನೀಡಿದ್ದಾರೆ. ಮೋದಿ ಇಡೀ ದೇಶದ ಎಲ್ಲ ಸಮುದಾಯಗಳನ್ನು ಸರಿಸಮನಾಗಿ ನೋಡಿಕೊಂಡು ಕಳೆದ ಐದು ವರ್ಷದಲ್ಲಿ ಯಾವುದೇ ಭ್ರಷ್ಟಾಚಾರ ಆಗದ ರೀತಿಯಲ್ಲಿ ಸುಭದ್ರ ಆಡಳಿತ ನೀಡಿರುವ ಮೋದಿ ಸಾಧನೆ ದೊಡ್ಡದಿದೆ. ಮತ್ತು 18 ರಿಂದ 35 ವರ್ಷದ ಯುವಕರು ನರೇಂದ್ರ ಮೋದಿಯನ್ನು ಬೆಂಬಲಿಸಿದ್ದರಿಂದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಗೆ ಹೆಚ್ಚಿನ ಮತಗಳು ಬರಲಿವೆ ಎನ್ನುವ ವಿಶ್ವಾಸ ಬಿಜೆಪಿ ವಲಯದಲ್ಲಿದೆ.

ಜೊಲ್ಲೆ ವರ್ಚಸ್ಸು: ಕಾಗವಾಡ ಕ್ಷೇತ್ರದ ದೊಡ್ಡ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೀರೇಶ್ವರ ಸಂಸ್ಥೆಗಳನ್ನು ಹುಟ್ಟು ಹಾಕಿ ಸಾಲ ಸೌಲಭ್ಯ ನೀಡಿದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರು ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದುವ ಮೂಲಕ ಜನರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಜೊಲ್ಲೆ ಉದ್ಯೋಗ ಸಮೂಹದ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿದ ಜೊಲ್ಲೆಗೆ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಹಿಡಿತ ಹೊಂದಿರುವ ಕಾರಣದಿಂದ ಬಿಜೆಪಿಗೆ ಅನುಕೂಲವಾಗಿದೆ. ಕಾಂಗ್ರೆಸ್‌ನವರು ಅಂದುಕೊಂಡಷ್ಟು ಲೀಡ್‌ ಪಡೆಯಲು ಬಿಜೆಪಿ ಬಿಡುವುದಿಲ್ಲ, ಕ್ಷೇತ್ರದಲ್ಲಿ ಬಿಜೆಪಿಗೆ ತನ್ನದೇ ಆದ ನೆಲೆ ಇದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

ಮಹಾದೇವ ಪೂಜೇರಿ

 

Advertisement

Udayavani is now on Telegram. Click here to join our channel and stay updated with the latest news.

Next