Advertisement

ಕ್ರೀಡಾ ಕ್ಷೇತ್ರದ ಹಿನ್ನಡೆಗೆ ಕಾಂಗ್ರೆಸ್‌ ಕಾರಣ

04:11 PM May 08, 2022 | Team Udayavani |

ಚಿತ್ರದುರ್ಗ: ಕಳೆದ ಏಳು ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡದ ಕಾರಣ ಇಂದಿಗೂ ಒಲಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕಗಳನ್ನು ಗೆಲ್ಲಲು ಆಗುತ್ತಿಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿರುವ ಹೊನಲು ಬೆಳಕಿನ ನಮೋ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಾಸ್ಕೆಟ್‌ಬಾಲ್‌, ವಾಲಿಬಾಲ್‌, ಫುಟ್‌ಬಾಲ್‌ ಆಟಗಾರರು ಸಾಕಷ್ಟು ಜನರಿದ್ದರು. ಕ್ರಮೇಣ ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಸಿಗುತ್ತಿರುವಷ್ಟು ಪ್ರೋತ್ಸಾಹ ಇತರೆ ಕ್ರೀಡೆಗಳಿಗೂ ಸಿಗಬೇಕು ಎಂದರು.

ಕ್ರೀಡೆಯಲ್ಲಿ ತರಬೇತಿಯಿಲ್ಲದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆಲ್ಲಲು ಆಗುವುದಿಲ್ಲ. ಕಳೆದೆರಡು ವರ್ಷಗಳಿಂದ ದೇಶದ ಜನ ಕೊರೋನಾದಿಂದ ತತ್ತರಿಸುತ್ತಿದ್ದ ಸಂಕಷ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿವಿನಿಂದ ಯಾರೂ ಸಾಯಬಾರದು ಎನ್ನುವ ಕಾರಣಕ್ಕೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿದ್ದಾರೆ. ಅದೇ ರೀತಿ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವ ನಮ್ಮ ಕ್ರೀಡಾಪಟುಗಳ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ವಿಧಾನಪರಿಷತ್‌ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಕ್ರೀಡೆಯನ್ನು ಆಡಿಸುವುದು ಸುಲಭವಲ್ಲ. ಮನಸ್ಸಿನ ಕಲ್ಮಶವನ್ನು ದೂರು ಮಾಡಿ ಪರಸ್ಪರ ಬಾಂಧವ್ಯ ಬೆಸೆಯುವ ಶಕ್ತಿ ಬಿಜೆಪಿಗೆ ಮಾತ್ರ ಇದೆ ಎಂದರು.

ಸ್ಫೂರ್ತಿ ಡೆವಲಪರ್ನ ಎಸ್‌.ಪಿ. ಚಿದಾನಂದ ಮಾತನಾಡಿ, ಕ್ರೀಡೆಯೆಂದರೆ ಬರೀ ಸೋಲು-ಗೆಲುವು ಮುಖ್ಯವಲ್ಲ. ಇದರಿಂದ ಏಕಾಗ್ರತೆ ಮೂಡಿ ಮಾನಸಿಕ ಹಾಗೂ ದೈಹಿಕವಾಗಿ ಉಲ್ಲಾಸದಿಂದಿರಲು ಸಾಧ್ಯ. ಮನಸ್ಸಿನ ಕಲ್ಮಶವನ್ನು ಕ್ರೀಡೆ ತೊಡೆದು ಹಾಕಿ ಪರಸ್ಪರ ಸ್ನೇಹ ವೃದ್ಧಿಸಲಿದೆ ಎಂದರು.

Advertisement

ವಿಭಾಗ ಸಂಘಟನಾ ಕಾರ್ಯದರ್ಶಿ ಜ್ಯೇಷ್ಠ ಪಡಿವಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಚಿದಾನಂದ ಗೌಡ, ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್‌, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಅನುರಾಧ, ಮುಖಂಡರಾದ ಸಿದ್ದೇಶ್‌ ಯಾದವ್‌, ನರೇಂದ್ರ ಹೊನ್ನಾಳ್‌, ಜಯಪಾಲ್‌, ರಾಜೇಶ್‌ ಬುರುಡೆಕಟ್ಟೆ, ಜಿ.ಎಸ್. ಅನಿತ್‌ ವೇದಿಕೆಯಲ್ಲಿದ್ದರು.

ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ವಿದೇಶಿ ವ್ಯವಹಾರ, ರಾಜ ತಾಂತ್ರಿಕತೆ, ಆರ್ಥಿಕ ನಿರ್ವಹಣೆಯಲ್ಲಿ ಬೇರೆ ದೇಶಗಳು ನಮ್ಮ ಪ್ರಧಾನಿಯವರ ಸಾಧನೆ ಗಮನಿಸುತ್ತಿವೆ. ಪ್ರತಿ ಶಾಲೆಗೂ ದೈಹಿಕ ಶಿಕ್ಷಕರು ಇರಲೇಬೇಕೆಂಬ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. -ವೈ.ಎ. ನಾರಾಯಣಸ್ವಾಮಿ, ವಿಧಾನಪರಿಷತ್‌ ಮುಖ್ಯ ಸಚೇತಕ

Advertisement

Udayavani is now on Telegram. Click here to join our channel and stay updated with the latest news.

Next