ಹಾವೇರಿ: ಅನರ್ಹ ಶಾಸಕರ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ ನಡೆಸಿದ್ದರೆ, ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆಂಬ ಗೊಂದಲದಲ್ಲಿದ್ದು, ಅಭ್ಯರ್ಥಿ ಆಯ್ಕೆ ಬಳಿಕವೇ ತಯಾರಿ ಚುರುಕುಗೊಳಿಸುವ ಆಲೋಚನೆಯಲ್ಲಿದೆ.
ಜಿಲ್ಲೆಯ ಹಿರೇಕೆರೂರು ಹಾಗೂ ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್.ಕೆ.ಪಾಟೀಲ, ಡಿ.ಆರ್.ಪಾಟೀಲ ಸೇರಿದಂತೆ ಇನ್ನಿತರರು ಎರಡ್ಮೂರು ಸುತ್ತಿನ ಸಭೆ ನಡೆಸಿದ್ದಾರೆ. ಉಭಯ ಕ್ಷೇತ್ರಗಳನ್ನು ತನ್ನ ಸುಪರ್ದಿಗೆ ಪಡೆಯಲು ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಬಿಜೆಪಿಯವರು ಜಿಲ್ಲೆಯ ಎಲ್ಲ ಕಡೆ ನಡೆಸುವಂತೆ ಪಕ್ಷ ಸಂಘಟನೆಯ ವಿವಿಧ ಕಾರ್ಯಕ್ರಮ ನಡೆಸಿದ್ದಾರೆಯೇ ಹೊರತು ಉಪ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಇನ್ನೂ ಯಾವುದೇ ಸಭೆ ನಡೆಸಿಲ್ಲ. ಯಾವ ನಾಯಕರ ಆಗಮನವೂ ಆಗಿಲ್ಲ. ಚರ್ಚೆಯೂ ನಡೆದಿಲ್ಲ. ಶತಾಯಗತಾಯ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಹಾಗೂ ಪಕ್ಷಕ್ಕೆ ಮೋಸ ಮಾಡಿದವರನ್ನು ಸೋಲಿಸಬೇಕು (ಅನರ್ಹ ಶಾಸಕರನ್ನು) ಎಂಬ ಗುರಿಯೊಂದಿಗೆ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ಯಾವುದಕ್ಕೂ ಧೃತಿಗೆಡದೆ ಪಕ್ಷ ಸಬಲೀಕರಣ ಕಾರ್ಯದಲ್ಲಿ ಬೆನ್ನುಲುಬಾಗಿ ನಿಂತು ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಶಕ್ತಿ ಕೇಂದ್ರ, ಮಂಡಲ, ಬೂತ್ ಕಾರ್ಯಕ್ರಮ ಸೇರಿದಂತೆ ಒಂದಿಲ್ಲೊಂದು ಪಕ್ಷ ಸಂಘಟನೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಲೇ ಇರುವುದರಿಂದ ಬಿಜೆಪಿ ಸಂಘಟನೆಗಿಂತ ಕಣಕ್ಕಿಳಿಯುವ ಅಭ್ಯರ್ಥಿ ಅಧಿಕೃತವಾಗಿ ಘೋಷಣೆಯಾಗುವುದನ್ನೇ ಕಾಯುತ್ತಿದೆ.
ಅನರ್ಹರ ಪರ ಮಾತನಾಡಿದರೆ ಕ್ರಮ: ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಅನರ್ಹ ಶಾಸಕರ ಪರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬ್ಲಾಕ್ ಅಧ್ಯಕ್ಷರನ್ನು ಉಚ್ಛಾಟಿಸುವ ಜತೆಗೆ ಕ್ರಿಯಾಶೀಲ ಇಲ್ಲದ ಘಟಕಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಿಸಿ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿರೇಕೆರೂರು-ರಟ್ಟಿಹಳ್ಳಿ ಬ್ಲಾಕ್ ಅಧ್ಯಕ್ಷರನ್ನು ಉಚ್ಛಾಟಿಸಿ, ಹೊಸ ಅಧ್ಯಕ್ಷರನ್ನು ನೇಮಿಸಿದ್ದಾರೆ. ಇತ್ತ ಬಿಜೆಪಿಯ ಕ್ಷೇತ್ರ ಮಟ್ಟದ ಮುಖಂಡರು-ಕಾರ್ಯಕರ್ತರು ಅನರ್ಹ ಶಾಸಕರು ಅಧಿಕೃತವಾಗಿ ಪಕ್ಷದ ಅಭ್ಯರ್ಥಿ ಘೋಷಣೆಯಾದ ಬಳಿಕವಷ್ಟೇ ಬೆಂಬಲಿಸುವ, ಅವರ ಪರ ಪ್ರಚಾರ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ರಾಜಕೀಯ ವೈರತ್ವ ಸಾಧಿಸಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಬರಬಹುದಾದ ಅನರ್ಹ ಶಾಸಕರನ್ನು ಬೆಂಬಲಿಸಲು ಮುಜುಗರವೂ ವ್ಯಕ್ತಪಡಿಸುತ್ತಿದ್ದಾರೆ.
ಅಭ್ಯರ್ಥಿ ಹುಡುಕಾಟ: ಉಪಚುನಾವಣೆ ನಡೆಯಬಹುದಾದ ರಾಣಿಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಹುಡುಕಾಟ ಸಮಸ್ಯೆ ಇಲ್ಲ. ಇಲ್ಲಿ ಹಿರಿಯ ಮುಖಂಡ ಕೆ.ಬಿ. ಕೋಳಿವಾಡ ಇಲ್ಲವೇ ಅವರ ಪುತ್ರ ಪ್ರಕಾಶ ಕೋಳಿವಾಡ ಅವರಿಗೆ ಟಿಕೆಟ್ ನೀಡುವುದು ಖಚಿತ. ಆದರೆ, ಹಿರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪ್ರಬಲ-ಪ್ರಭಾವಿ ಅಭ್ಯರ್ಥಿಯ ಕೊರತೆ ಎದುರಿಸುತ್ತಿದೆ.
ಒಟ್ಟಾರೆ ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆಯಲ್ಲಿ ತೊಡಗಿದ್ದರೆ, ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆಂಬ ಕಸಿವಿಸಿಯಲ್ಲಿದೆ. ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೋ, ಇಲ್ಲವೋ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ. ಈ ಕುರಿತು ಸ್ಪಷ್ಟತೆ ಹೊರ ಬಿದ್ದ ಬಳಿಕವೇ ಉಪ ಚುನಾವಣೆ ಕಾವು ಪಡೆಯಲಿದೆ.
ಬಿಜೆಪಿಯಲ್ಲಿ ನಿರಂತರ ಸಂಘಟನಾ ಚಟುವಟಿಕೆ ನಡೆಯುತ್ತಲೇ ಇರುವುದರಿಂದ ಪಕ್ಷ ಸಂಘಟನೆಗೆ ವಿಶೇಷ ಒತ್ತು ಕೊಡುವ ಅನಿವಾರ್ಯತೆ ಇಲ್ಲ. ಪಕ್ಷದ ಅಭ್ಯರ್ಥಿ ಅ ಧಿಕೃತವಾಗಿ ಘೋಷಣೆಯಾದ ಬಳಿಕಷ್ಟೇ ಪಕ್ಷದಲ್ಲಿ ತುರುಸು ಕಾಣಲಿದೆ.
-ಶಿವರಾಜ ಸಜ್ಜನರ, ಜಿಲ್ಲಾಧ್ಯಕ್ಷ, ಬಿಜೆಪಿ
-ಎಚ್.ಕೆ. ನಟರಾಜ