Advertisement

ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್‌

10:27 AM Sep 16, 2019 | Lakshmi GovindaRaju |

ಬೆಂಗಳೂರು: ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಶತಾಯ ಗತಾಯ ಎಲ್ಲ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಹಠ ಹಿಡಿದಿರುವ ಕಾಂಗ್ರೆಸ್‌, ಶನಿವಾರ ಹನ್ನೊಂದು ಶಾಸಕರ ಕ್ಷೇತ್ರಗಳ ಕಾಂಗ್ರೆಸ್‌ ಮುಖಂಡರ ಸಭೆ ನಡೆಸಿತು.

Advertisement

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪಕ್ಷ ಬಿಟ್ಟು ಹೋದವರಿಗೆ ಸೂಕ್ತ ಪಾಠ ಕಲಿಸಬೇಕೆಂದು ನಿರ್ಧರಿಸಲಾಯಿತು. ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಿರುವ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲುವ ಅವಕಾಶ ಇದ್ದು, ಆ ಕ್ಷೇತ್ರಗಳಲ್ಲಿಯೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸಲಾಯಿತು.

ಮೊದಲಿಗೆ ಎಂ.ಟಿ.ಬಿ.ನಾಗರಾಜ್‌ ಪ್ರತಿನಿಧಿಸುತ್ತಿದ್ದ ಹೊಸಕೋಟೆ ಕ್ಷೇತ್ರದಲ್ಲಿ ಸೆ.21ರಂದು ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಭೆಯಲ್ಲಿ ಒಲವು ವ್ಯಕ್ತವಾಯಿತು. ಆದರೆ, ಅಂತಿಮವಾಗಿ ಜೆಡಿಎಸ್‌ ಜತೆ ಮೈತ್ರಿ ಕುರಿತು ನಿರ್ಧರಿಸುವ ಅಧಿಕಾರವನ್ನು ಹೈಕಮಾಂಡ್‌ಗೆ ಬಿಡಲು ತೀರ್ಮಾನಿಸಲಾಯಿತು.

ಚಿಕ್ಕಬಳ್ಳಾಪುರ, ಕೆ.ಆರ್‌.ಪೇಟೆ, ಹುಣಸೂರು, ಮಸ್ಕಿ, ಯಲ್ಲಾಪುರ, ಗೋಕಾಕ್‌, ಅಥಣಿ, ಕಾಗವಾಡ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ ಕ್ಷೇತ್ರಗಳ ಸಭೆ ನಡೆಸಿ, ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲಾಯಿತು. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌, ಆಂಜಿನಪ್ಪ, ನವೀನ್‌ ಕಿರಣ್‌, ಜಗದೀಶ್‌ ರೆಡ್ಡಿ ಹೆಸರು ಪ್ರಸ್ತಾಪವಾಯಿತು. ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಚಂದ್ರಶೇಖರ್‌, ಪ್ರಕಾಶ್‌, ಕಿಕ್ಕೇರಿ ಸುರೇಶ್‌, ಅಂಬರೀಷ್‌ ಎಂಬುವರ ಹೆಸರು ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ.

ಮಾಹಿತಿ ಸಂಗ್ರಹ: ಸಭೆ ನಂತರ ಮಾತನಾಡಿದ ದಿನೇಶ್‌ ಗುಂಡೂರಾವ್‌, ಎಂಟು ಕ್ಷೇತ್ರಗಳ ಸಭೆ ನಡೆಸಿದ್ದೇವೆ. ವೀಕ್ಷಕರು ಆ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಬಂದಿದ್ದಾರೆ. ಈ ಬಾರಿ ಉಪ ಚುನಾವಣೆಯಲ್ಲಿ ನಮಗೆ ಒಳ್ಳೆಯ ಅವಕಾಶವಿದೆ. ಚುನಾವಣೆಗೆ ನಾವು ಸಂಪೂರ್ಣ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

Advertisement

ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವೆ. ಪಕ್ಷ ಸಂಘಟನೆಯಲ್ಲೂ ತೊಡಗಿದ್ದೇವೆ. ಮುಂದೆ ಯಾವ ರೀತಿಯ ಪರಿಸ್ಥಿತಿ ನಿರ್ಮಾಣ ಆಗುತ್ತೋ ನೋಡೋಣ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದರು.

18ಕ್ಕೆ ಸಿಎಲ್‌ಪಿ ಸಭೆ: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು ಸೆ.18ರ ಬುಧವಾರದಂದು ಕರೆಯಲಾಗಿದೆ. ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಸಭೆಯ ನೋಟಿಸ್‌ ಕಳುಹಿಸಿದ್ದು, ಸಭೆಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳು, ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಆಗುತ್ತಿರುವ ತಾರತಮ್ಯ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಲಾಗಿದೆ.

ಸುಧಾಕರ್‌ ರಾಜೀನಾಮೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರ ತೆರವಾಗಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ಸಲಹೆ ನೀಡಿದ್ದಾರೆ. ನಮ್ಮ ಅಭಿಪ್ರಾಯವನ್ನೂ ನಾಯಕರ ಗಮನಕ್ಕೆ ತಂದು ಗೆಲ್ಲುವಂತಹ ಅಭ್ಯರ್ಥಿ ಆಯ್ಕೆ ಮಾಡುವ ಭರವಸೆ ನೀಡಿದ್ದೇವೆ.
-ಶಿವಶಂಕರರೆಡ್ಡಿ, ಮಾಜಿ ಸಚಿವ

ಕೆ.ಆರ್‌.ಪೇಟೆ ಕ್ಷೇತ್ರದ ಉಪ ಚುನಾವಣೆ ಸಂಬಂಧ ಜಿಲ್ಲೆಯ ಮುಖಂಡರ ಸಭೆ ನಡೆಸಿ, ಅಭಿಪ್ರಾಯ ಪಡೆದಿದ್ದಾರೆ. ಶೀಘ್ರದಲ್ಲೇ ಅಲ್ಲಿ ಸಮಾವೇಶ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಪಡೆದು, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ.
-ಚೆಲುವರಾಯಸ್ವಾಮಿ, ಮಾಜಿ ಸಚಿವ

ಹುಣಸೂರು ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ನಡೆಸಲು ಸೂಚಿಸಿದ್ದಾರೆ. ನನಗೆ ಅವಕಾಶ ಸಿಗಬಹುದು ಎಂಬ ಆಸೆಯಿದೆ. ಕ್ಷೇತ್ರದಲ್ಲಿ ಸದ್ಯದಲ್ಲೇ ಸಮಾವೇಶ ನಡೆಸುತ್ತೇವೆ.
-ಎಚ್‌.ಪಿ.ಮಂಜುನಾಥ್‌, ಮಾಜಿ ಶಾಸಕ

ರಾಣಿಬೆನ್ನೂರು ಕ್ಷೇತ್ರದಲ್ಲಿ ಉಪ ಚುನಾವಣೆಗೆ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಸೇರಿ ಹಲವರು ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಮುಖಂಡರಿಗೆ ತಿಳಿಸಿದ್ದೇವೆ.
-ರಾಮಪ್ಪ, ಹರಿಹರ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next