Advertisement

ಬಿಜೆಪಿ ಪರಿವರ್ತನಾ ಯಾತ್ರೆ

02:49 PM Nov 12, 2017 | Team Udayavani |

ಮಹಾನಗರ: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ಪರಿವರ್ತನಾ ಯಾತ್ರೆಯ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ಜನಪರ ಯೋಜನೆಗಳನ್ನು ರಾಜ್ಯ ಸರಕಾರ ಟೀಕಿಸುತ್ತಿದ್ದು, ಅದಕ್ಕೆ ಅಭಿವೃದ್ಧಿಯ ಮೂಲಕ ಪ್ರಧಾನಿ ಅವರು ತಕ್ಕ ಉತ್ತರವನ್ನು ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದ್ದರೂ, ತಪ್ಪೇ ಮಾಡಲಿಲ್ಲ ಎಂದು ತೋರಿಸಿಕೊಳ್ಳುತ್ತಿದೆ. ಇದು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಗಳು ಮಾಡುವ ಮೋಸ. ಸಿಎಂ ಸಿದ್ದರಾಮಯ್ಯ ಅವರಲ್ಲಿ ತಿದ್ದಿಕೊಳ್ಳುವ ಗುಣವಿಲ್ಲ ಎಂದು ವಿವರಿಸಿದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ರಾಜ್ಯದ ಜನತೆ ಈಗಾಗಲೇ ಒಪ್ಪಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವಾಗ ಜಾರಿಗೆ ತಂದಿರುವ ಅನೇಕ ಯೋಜನೆಗಳನ್ನು ರಾಜ್ಯದ ಜನತೆ ಇಂದಿಗೂ ಮರೆತಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯ ಸರಕಾರ ಬಡವರ ಹಕ್ಕುಪತ್ರಕ್ಕೆ 10,500 ರೂ. ವಸೂಲಿ ಮಾಡಿ, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಉಚಿತವಾಗಿ ಹಕ್ಕುಪತ್ರ ನೀಡುತ್ತೇವೆ ಎಂದರು.

Advertisement

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರ್‌ ಮಾತನಾಡಿ, ಜಿಲ್ಲೆಯಲ್ಲಿನ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ. ಕಾಂಗ್ರೆಸ್‌ ಪಕ್ಷಕ್ಕೆ ಇದರಿಂದ ನಡುಕ ಹುಟ್ಟಿದೆ. 2014ರಲ್ಲಿ ನವಭಾರತ ಕಲ್ಪನೆಯ ನ್ನಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಉದ್ದಗಲ ಓಡಾಡಿ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅದರಂತೆಯೇ ಪರಿವರ್ತನಾ ಯಾತ್ರೆಯ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ರಾಜ್ಯದ ಜನತೆ ಆಶೀರ್ವದಿಸಿದೆ ಎಂದರು.

ರಾಜ್ಯದಲ್ಲಿನ ಆಡಳಿತ ಯಂತ್ರ ಕುಸಿದಿದೆ. ರೈತರ ಬಗ್ಗೆ ರಾಜ್ಯ ಸರಕಾರಕ್ಕೆ ಕಾಳಜಿ ಇಲ್ಲ. ರಾಜ್ಯದ ರೈತರು ಆತ್ಮಹತ್ಯೆ ಮಾಡುತ್ತಿದ್ದರೆ, ರಾಜ್ಯ ಸರಕಾರ ಕಣ್ಣು ಮುಚ್ಚಿ ಕೂತಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಜಿಲ್ಲೆ ಈಗಾಗಲೇ ತಯಾರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹತ್ಯೆಯಿಂದ ಇಲ್ಲಿನ ಮಂದಿ ಬೇಸತ್ತಿದ್ದಾರೆ. ಜಿಲ್ಲೆಯಲ್ಲಿ ಮರಳು ಮಾಫಿಯ ಹೆಚ್ಚಾಗುತ್ತಿದ್ದು ಇದಕ್ಕೆ ಪೂರ್ಣವಿರಾಮ ನೀಡಲು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದ ನಳಿನ್‌ ಕುಮಾರ್‌ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ವಿಪಕ್ಷ ನಾಯಕ ಈಶ್ವರಪ್ಪ, ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಉಪಸ್ಥಿತರಿದ್ದರು.

ಕರಾವಳಿಯ ಋಣ
ನಮ್ಮ ಕುಟುಂಬಕ್ಕೂ ಕರಾವಳಿಗೂ ಅನೇಕ ವರ್ಷಗಳ ಸಂಬಂಧವಿದೆ. ಕೆಲವರ್ಷಗಳ ಹಿಂದೆ ಮಂಗಳೂರಿನ ಕಾರ್ಯಕರ್ತರು ಇಲ್ಲಿನ ಅಕ್ಕಿಯನ್ನು ನಮ್ಮ ಮನೆಗೆ ಕಳುಹಿಸುತ್ತಿದ್ದರು. ಇದರಿಂದಾಗಿ ಕರಾವಳಿಯ ಋಣ ನನ್ನ ಮೇಲಿದೆ. ಅಲ್ಲದೆ ನನ್ನ ಪತ್ನಿ ಮೂಲತಃ ಕರಾವಳಿ ಭಾಗದವಳು. ಇದರಿಂದ ನಾನು ಸಲೀಸಾಗಿ ತುಳು ಭಾಷೆ ಮಾತನಾಡುತ್ತೇನೆ.
– ಕುಮಾರ ಬಂಗಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next