ಶಿರಸಿ: ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಮುಳುಗಿದೆ. ವರ್ಗಾವಣೆಯನ್ನು ಒಂದು ರೀತಿಯ ಬಿಡ್ಡಿಂಗ್ ರಾಜಕಾರಣ ಮಾಡುತ್ತಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಸೆ.15ರ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಸರಕಾರ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಇವರ ಮಾತನ್ನು ನಾವು ಕೇಳಲು ತಯಾರಿಲ್ಲ ಎಂದ ಅವರು ಬಿಜೆಪಿಯಿಂದ ಯಾರು ಕೂಡ ಕಾಂಗ್ರೆಸ್ ಗೆ ಹೋಗಲ್ಲ ಎಂದರು.
ಸೌಜನ್ಯ ಪ್ರಕರಣಕ್ಕೆ ಯಾವುದೇ ರಾಜಕೀಯ ಬಣ್ಣ ಲೇಪನವಾಗಿಲ್ಲ. ಅವಳ ಕೊಲೆ, ಅತ್ಯಾಚಾರದ ಆರೋಪಿಗಳು ಹಾಗೂ ಅದಕ್ಕೆ ಬೆಂಬಲ ನೀಡಿದ ರಾಜಕಾರಣಿಗಳು ಹುಚ್ಚು ನಾಯಿಯಂತೆ ತಿರುಗುವ ಸ್ಥಿತಿ ಬರಲಿದೆ ಎಂದು ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ತನಿಖೆ ವಿಚಾರವಾಗಿ ಪೂಂಜಾ ಪುನರುಚ್ಚರಿಸಿದರು.
ಸೌಜನ್ಯ ಪ್ರಕರಣ ವೇಳೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದರು. ಆಗ ಅದನ್ನು ಸಿಐಡಿಗೆ ತನಿಖೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಸಿದ್ದರಾಮಯ್ಯ ಸರ್ಕಾರ ಆರು ತಿಂಗಳ ಕಾಲ ಸಿಐಡಿ ತನಿಖೆ ಮಾಡಿತ್ತು. ಹನ್ನೊಂದು ವರ್ಷಗಳ ಕಾಲ ಸಿಬಿಐ ತನಿಖೆ ಆಗಿತ್ತು. ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಲು ಹೋರಾಟ ಮಾಡಿದ್ದಾರೆ. ಸಿಎಂಗೆ ನಮ್ಮ ನಿಯೋಗ ಕೂಡ ಭೇಟಿ ನೀಡಿತ್ತು. ಪ್ರಕರಣದ ತನಿಖೆ ರಾಜ್ಯ ಸರ್ಕಾರ, ಪೋಷಕರು ತೆಗೆದುಕೊಳ್ಳಬೇಕಾದ ನಿರ್ಣಯ. ಮುಂದಿನ ಕಾನೂನು ಹೋರಾಟ ಮಾಡುವ ಅನಿವಾರ್ಯತೆ ಕೂಡ ಇದೆ ಎಂದೂ ಹೇಳಿದರು.
ಕಾಂಗ್ರೆಸ್ ಹಿಂದಿನ ಇತಿಹಾಸ ಮೆಲುಕು ಹಾಕಲಿ. ಭ್ರಷ್ಟಾಚಾರ ರಾಜಕಾರಣ ಮಾಡಿ ಸಮಾಜ-ದೇಶವನ್ನು ದಾರಿ ತಪ್ಪಿಸಿದ ಕೆಲಸ ಮಾಡಿದ್ದು ಕಾಂಗ್ರೆಸ್ ಎಂದರು.