ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಕಿರಿಕ್ ಪಾರ್ಟಿ ಇದ್ದ ಹಾಗೆ, ಅವರ ನಾಯಕರ ಹೇಳಿಕೆ ಸುಳ್ಳಿನ ಕಂತೆ ಎಂದು ಸಚಿವ ಶ್ರೀರಾಮುಲು ಶನಿವಾರ ಹೇಳಿಕೆ ನೀಡಿದ್ದಾರೆ.
ಕೇಶವ ಕುಂಜಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 10 ರಿಂದ 20 ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳುತ್ತಿರುವ ಕಾಂಗ್ರಸ್ಸಿಗರ ಹೇಳಿಕೆ ಸುಳ್ಳಿನ ಕಂತೆಯಾಗಿದೆ ಎಂದರು.
ಶಾಸಕ ಪ್ರೀತಂ ಗೌಡ ಕಾಂಗ್ರೆಸ್ ಗೆ ಅರ್ಜಿ ಹಾಕಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ನಾಯಕರು ಬರಿ ಕಿರಿಕ್ ಮಾಡುತ್ತಿದ್ದಾರೆ. ಸೋಲಿನ ಹತಾಶೆಯಿಂದ ಪಾಪ ಈ ರೀತಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ, ಗೋವಾದಲ್ಲೂ ಹೋಗಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಯಾವುದೇ ಸುದ್ದಿಯಲ್ಲಿಲ್ಲ. ಹೀಗಾಗಿ ಟಿಆರ್ ಪಿಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.
ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ವಿಪಕ್ಷ ನಾಯಕ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಂದ ಮತ ಮಾತ್ರ ಗುದ್ದಿ ಗುದ್ದಿ ಹಾಕಿಸಿಕೊಂಡಿದ್ದಾರೆ. ಆದರೆ ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಸಿದ್ದರಾಯಮ್ಯ ಮಾಡಿದರು. ಅವರ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದರು. ರಾಜ್ಯದಲ್ಲಿ ಶೇಕಡಾ 18 ರಷ್ಟಿರುವ ಮುಸ್ಲಿಂರಿದ್ದಾರೆ. ಆದರೆ ಅವರಿಗೆ ಯಾವುದೇ ಸ್ಥಾನಮಾನ ಕಾಂಗ್ರೆಸ್ ನೀಡಿಲ್ಲ. ಸಿದ್ದರಾಯಮ್ಯ ನಾನೇ ಅಹಿಂದ ನಾಯಕ ಅಂತ ಹೇಳಿಕೊಂಡು ಓಡಾಡುತ್ತಾರೆ. ಆದರೆ ಸಿಎಂ ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರ ಕೊಡಲಿ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯಗೆ 5 ಕಡೆಯ ಕ್ಷೇತ್ರದ ಜನರು ತಮ್ಮ ತಮ್ಮ ಕ್ಷೇತ್ರದಿಂದ ಸ್ಪರ್ಧಿಸಲು ಕರೆಯುತ್ತಿದ್ದಾರಂತಲ್ಲ, ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ 224 ಕ್ಷೇತ್ರದ ಕಡೆಯೂ ಕರೆದಿರಬಹುದು ಎಂದು ವ್ಯಂಗ್ಯವಾಡಿದರು.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಆ ವಿಶ್ವಾಸ ನಮಗಿದೆ ಎಂದರು.