ಲಕ್ನೋ: ಉತ್ತರಪ್ರದೇಶದಲ್ಲಿ ಈ ಮೊದಲು ಕಾಂಗ್ರೆಸ್ 7 ಸೀಟಿನ ಇನ್ನೋವಾ ಕಾರಿನ ಪಕ್ಷವಾಗಿದ್ದು, ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಕೂಟರ್ ಪಕ್ಷ(ಎರಡು ಸೀಟು)ವಾಗಲಿದೆ ಎಂದು ಸಚಿವ ಸತೀಶ್ ಮಹಾನಾ ಶುಕ್ರವಾರ(ಆಗಸ್ಟ್ 06) ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಟೋಕಿಯೊ: ಸೆಮಿ ಫೈನಲ್ ನಲ್ಲಿ ಎಡವಿದ ಕುಸ್ತಿಪಟು ಭಜರಂಗ್ ಪೂನಿಯಾ
ಪಂಚಾಯತ್ ಆಜ್ ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನ್ನು ಇನ್ನೋವಾ(7 ಸೀಟು) ಕಾರಿಗೆ ಹೋಲಿಕೆ ಮಾಡಿ ಟೀಕಿಸಿದ್ದಾರೆ. ಇನ್ನೋವಾ ಏಳು ಸೀಟುಗಳನ್ನು ಹೊಂದಿರುವ ಎಸ್ ಯುವಿ ವಾಹನ. ಕಾಂಗ್ರೆಸ್ ಪಕ್ಷ ಉತ್ತರಪ್ರದೇಶ ವಿಧಾನಸಭೆಯಲ್ಲಿ ಕೇವಲ 7 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದೆ. ಆದರೆ ಇನ್ನು ಮುಂದೆ ಸ್ಕೂಟರ್ ಪಕ್ಷವಾಗಲಿದೆ. ಅಂದರೆ ಸ್ಕೂಟರ್ ನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದಾಗಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಎರಡು ಸ್ಥಾನಗಳಲ್ಲಿ ಗೆಲ್ಲಲಿದ್ದು, ಬಿಎಸ್ಪಿ ಇನ್ನೋವಾ ಪಕ್ಷವಾಗಲಿದೆ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳಗಳನ್ನು ಹೇಗೆ ಎದುರಿಸಲಿದ್ದೀರಿ ಎಂಬ ಪ್ರಶ್ನೆಗೆ ಸತೀಶ್ ಮಹಾನಾ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.
ನನ್ನ ಲೆಕ್ಕಾಚಾರದ ಪ್ರಕಾರ ಇಬ್ಬರು ವ್ಯಕ್ತಿಗಳು ನಮ್ಮ ಹಿಂದಿದ್ದಾರೆ, ಅವರಲ್ಲಿಯೇ ಯಾರು ಎರಡನೇ ಮತ್ತು ಮೂರನೇ ಸ್ಥಾನಕ್ಕೆ ಬರಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.
403 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಸಾಧಿಸುವುದಾಗಿ ಸಮಾಜವಾದಿ ಪಕ್ಷ ಹೇಳಿಕೊಂಡಿದೆ ಎಂದ ಮಹಾನಾ, ಸಮಾಜವಾದಿ ಪಕ್ಷದ ಸ್ಲೋಗನ್ ಪ್ರಕಾರ 2022ರಲ್ಲಿ ನಮಗೆ 22 ಸೈಕಲ್ ಎಂದು ಹೇಳಿದ್ದಾರೆ, ಅಂದರೆ ಅದರ ಅರ್ಥ ಮುಂಬರುವ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬುದಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ 2017ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರದ ಚಿತ್ರಣವನ್ನು ಬದಲಾಯಿಸಲಾಗಿದೆ. 2017ರ ಚುನಾವಣೆಗೂ ಮೊದಲು ಇಲ್ಲಿ ಕೈಗಾರಿಕೆ ಚರ್ಚೆಯ ವಸ್ತುವಾಗಿರಲಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಕೈಗಾರಿಕೆ ಪ್ರಮುಖ ಚರ್ಚೆಯ ವಸ್ತುವಾಗಲಿದೆ ಎಂದು ಹೇಳಿದರು.