ಬಾದಾಮಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಅದು ಸಾಧ್ಯವೇ ಇಲ್ಲ. ಮುಂದಿನ ಬಾರಿಯೂ ನಾವೇ(ಬಿಜೆಪಿ) ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷದವರು ಕನಸು ಕಾಣುತ್ತಿದ್ದಾರೆ. ಭಾವಚಿತ್ರದ ಸಲುವಾಗಿ ಸಿದ್ದು, ಡಿಕೆಶಿ ನಡುವೆ ಯುದ್ಧ ನಡೆಯುತ್ತಿದೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಕಳೆದ ವಾರ ಸುರಿದ ಅತಿಯಾದ ಮಳೆಯಿಂದ ಬೆಳೆ, ಮನೆ ಹಾನಿಯಾಗಿದೆ. ಇದರ ಸರ್ವೇ ಮಾಡಿಸಲಾಗುತ್ತಿದೆ. ಸರ್ವೇ ಮುಗಿದ ನಂತರ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಯೋಗ್ಯ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಕೆರೂರ ಪಟ್ಟಣದಲ್ಲಿ ಕಳೆದ ಗಣೇಶ ಮೆರವಣಿಗೆಯಲ್ಲಿ ಸಿಪಿಐ ಮೇಲಿನ ಹಲ್ಲೆ ಘಟನೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸೂಕ್ಷ್ಮ ವಿಚಾರವಾಗಿದ್ದು, ಈ ಕುರಿತು ಎಸ್.ಪಿ. ಅವರಿಂದ ವರದಿ ಪಡೆದು ವಿಧಾನಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ರಾಜ್ಯ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪುರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಬಸವರಾಜ ಯಂಕಂಚಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಈ ವೇಳೆ ಇದ್ದರು.