Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ನಿಶ್ಚಿತ

01:06 PM Mar 23, 2022 | Team Udayavani |

ಬೀದರ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ಗಾಬರಿಯಾಗುವ ಅಗತ್ಯವಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿ ಅಭಿಯಾನದ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎದೆಗುಂದುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಕಾರ್ಯಕರ್ತರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪಕ್ಷದ ಬಾವುಟ ಹಿಡಿಯಲು ಸಜ್ಜಾಗಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವವರೆಗೆ ಸಮಾವೇಶದ ವೇದಿಕೆ ಮೇಲೆ ಕೂಡುವುದಿಲ್ಲ ಎಂದು ನಿರ್ಣಯಿಸಿದ್ದೇವೆ. ಸದಸ್ಯರೇ ಪಕ್ಷದ ಆಧಾರ ಸ್ತಂಭ ಮತ್ತು ದೊಡ್ಡ ಶಕ್ತಿ. 12 ವರ್ಷಗಳ ನಂತರ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ತ್ರಿವರ್ಣ ಧ್ವಜವುಳ್ಳ ಪಕ್ಷದ ಬಾವುಟ ಎದೆ ಮೇಲೆ ಹಾಕಿಕೊಳ್ಳಲು ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ. ಹಾಗಾಗಿ ಈ ಪಕ್ಷದ ಸದಸ್ಯನಾಗುವುದೇ ದೊಡ್ಡ ಭಾಗ್ಯ ಎಂದು ಹೇಳಿದರು.

ಸದಸ್ಯತ್ವ ಅಭಿಯಾನಕ್ಕೆ ಇನ್ನೊಂದು ವಾರ ಮಾತ್ರ ಉಳಿದಿದ್ದು, ಜವಾಬ್ದಾರಿ ಹೊತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕಾಂಗ್ರೆಸ್‌ ಸದಸ್ಯರನ್ನಾಗಿ ಮಾಡಬೇಕು. ಮನೆ-ಮನೆಗೆ ಭೇಟಿ ನೀಡಿ ಪಕ್ಷದ ಸಿದ್ಧಾಂತ, ಸಾಧನೆಗಳು, ಜತೆಗೆ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಬಿಜೆಪಿ ಕಾರ್ಯಕರ್ತರಿಗೆ ಡಬಲ್‌ ಎಂಜಿನ್‌ ಸರ್ಕಾರದ ಜನವಿರೋಧಿ ಆಡಳಿತದ ಬಗ್ಗೆ ತಿಳಿ ಹೇಳಿ ಅವರನ್ನೂ ಪಕ್ಷದತ್ತ ಸೆಳೆಯಬೇಕು ಎಂದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಯಾವುದೇ ಪಕ್ಷಕ್ಕೆ ಸದಸ್ಯರೇ ಬುನಾದಿ. ರಾಜ್ಯದಲ್ಲಿ 60 ಲಕ್ಷ ಸದಸ್ಯತ್ವ ಗುರಿ ಇದ್ದು, ಅದರಂತೆ ಬೀದರನಲ್ಲಿ 2 ಲಕ್ಷ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಕಾಂಗ್ರೆಸ್‌ ಉಳಿದರೆ ಮಾತ್ರ ರಾಷ್ಟ್ರ ಮತ್ತು ನಾವು ಉಳಿಯಲು ಸಾಧ್ಯ. ಹಾಗಾಗಿ ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮತ್ತು ಭ್ರಷ್ಟ ಬಿಜೆಪಿ ಸರ್ಕಾರ ಬುಡ ಸಮೇತ ಕಿತ್ತು ಹಾಕಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಾದರೆ ಅತ್ಯಧಿಕ ಸದಸ್ಯತ್ವಕ್ಕೆ ಒತ್ತು ಕೊಡಬೇಕಿದೆ ಎಂದರು.

ಮಾಜಿ ಕೇಂದ್ರ ಸಚಿವರಾದ ರಾಜ್ಯದ ಪಿಆರ್‌ಒ ಸುದರ್ಶನ ನಾಚಿಯಪ್ಪ ಮಾತನಾಡಿ, ಕಾಂಗ್ರೆಸ್‌ ಸದಸ್ಯತ್ವದಲ್ಲಿ ಕರ್ನಾಟಕ ಎಂದಿಗೂ ಮುಂಚೂಣಿಯಲ್ಲಿರುತ್ತದೆ. ಸದಸ್ಯತ್ವಕ್ಕೆ ಇನ್ನೊಂದು ವಾರ ಮಾತ್ರ ಅವಕಾಶ ಇದ್ದು, ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.

ಶಾಸಕರಾದ ರಾಜಶೇಖರ ಪಾಟೀಲ ಮತ್ತು ರಹೀಮ್‌ ಖಾನ್‌ ಮಾತನಾಡಿದರು. ಸಭೆಯಲ್ಲಿ ಅಭಿಯಾನದ ರಾಜ್ಯ ಎಪಿಆರ್‌ಒ ಮೊತಿಲಾಲ್‌ ದೇವಕಲ್‌, ಎಂಎಲ್‌ಸಿ ಅರವಿಂದ ಅರಳಿ, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್‌, ವೆಂಕಟೇಶ್‌, ರಘುನಂದನ್‌, ಸುರೇಶ ಹೆಗಡೆ, ಮಾಲಾ ನಾರಾಯಣ, ನರಸಿಂಗರಾವ್‌ ಸೂರ್ಯವಂಶಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ ಸೇರಿದಂತೆ ಇತರರು ಇದ್ದರು.

ಬೀದರನಲ್ಲಿ ಸದಸ್ಯತ್ವಕ್ಕೆ ಅಸಮಾಧಾನ

ಬೀದರ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಕಾಂಗ್ರೆಸ್‌ ಸದಸ್ಯತ್ವ ಸಮಧಾನಕರವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬೇಸರ ವ್ಯಕ್ತಪಡಿಸಿದರು.

ಏಳು ಜನ ಟಿಕೆಟ್‌ ಕೇಳುವ ಬಸವಕಲ್ಯಾಣ ಕ್ಷೇತ್ರದಲ್ಲಿ ಕೇವಲ 7600 ಸದಸ್ಯತ್ವ ಅಗಿದೆ. 40 ಸಾವಿರ ಸದಸ್ಯತ್ವ ಮಾಡಿ ಟಿಕೆಟ್‌ ಕೇಳಿದರೆ ಕಿಮ್ಮತ್ತು ಇರುತ್ತದೆ ಎಂದ ಡಿಕೆಶಿ, ಶಾಸಕ ರಹೀಮ್‌ ಖಾನ್‌ ಕ್ಷೇತ್ರವಾದ ಬೀದರ ಉತ್ತರದಲ್ಲಿ 7400 ಆಗಿದ್ದು, ಅವರು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ ಎಂದು ವ್ಯಂಗ್ಯವಾಡಿದರು. ಭಾಲ್ಕಿ ಕ್ಷೇತ್ರದಲ್ಲಿ 20 ಸಾವಿರ ನೋಂದಣಿ ಆಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮರ್ಯಾದೆ ಉಳಿಸಿಕೊಂಡಿದ್ದಾರೆ. ಇನ್ನೂ ಕಾಂಗ್ರೆಸ್‌ ಶಾಸಕರಿಲ್ಲದ ಔರಾದ ಕ್ಷೇತ್ರದಲ್ಲಿ 17 ಸಾವಿರಕ್ಕೂ ಅಧಿಕ ಸದಸ್ಯತ್ವ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಹುಮನಾಬಾದನಲ್ಲಿ 17 ಸಾವಿರ ಆಗಿದ್ದು, ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next