ಕಡೂರು: ಜನರ ಬದುಕು ಕಟ್ಟಿಕೊಡುವ ಕೆಲಸಕ್ಕಾಗಿ ಕಾಂಗ್ರೆಸ್ ಒಂದಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದರು. ಚಿಕ್ಕಮಗಳೂರಿನಲ್ಲಿ ನಡೆಯು ತ್ತಿರುವ ಬಸವ ತತ್ವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮಾರ್ಗಮಧ್ಯೆ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ಧಿಯ ಪಂಚಸೂತ್ರಗಳನ್ನು ಮುಂದಿಟ್ಟುಕೊಂಡು ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬ ತತ್ವದ ಆಧಾರದ ಮೇಲೆ ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಜನರ ಸೇವೆಯನ್ನು ಮಾಡಲಿದೆ ಎಂದು ಭರವಸೆ ನೀಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲಾ ಧರ್ಮದ ಮತ್ತು ಜನರನ್ನು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸದೃಢಗೊಳಿಸಲಾಗುವುದು ಎಂದರು.
ರಾಜ್ಯದ ಬಿಜೆಪಿ ಸರಕಾರ ಜನರ ಅಭ್ಯುದಯಕ್ಕೆ ಸ್ಪಂದಿಸುತ್ತಿಲ್ಲ. ಶೇ. 40 ಕಮಿಷನ್ ವ್ಯವಹಾರದ ಹಗರಣ ಜಗಜ್ಜಾಹೀರಾಗಿದೆ. ಜನರ ತೆರಿಗೆಯ ಹಣ ದುರ್ಬಳಕೆಯಾಗುತ್ತಿದೆ. ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಇದೊಂದು ಜನಪರ ಸರಕಾರವಲ್ಲ ಎಂದು ಗಂಭೀರ ಆರೋಪ ಮಾಡಿದರು.
ವಿಧಾನ ಪರಿಷತ್ ಮಾಜಿ ಸಚೇತಕ ಬಿ.ಎಲ್. ಶಂಕರ್, ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ| ಡಿ.ಎಲ್. ವಿಜಯಕುಮಾರ್, ಎಂ.ಎಲ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸಖರಾಯಪಟ್ಟಣ ಬ್ಲಾಕ್ ಅಧ್ಯಕ್ಷ ಮಹಡಿಮನೆ ಸತೀಶ್, ಕಡೂರು ಬ್ಲಾಕ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಮುಖಂಡರಾದ ಎಸ್.ಕೆ. ಸುಮನ್, ಕಿರಣ್‌ಕುಮಾರ್, ಕೆ.ಆರ್. ಮಂಜುನಾಥ್, ಎಸ್.ಎಂ. ರಘು, ರವಿ ಮುಂತಾದವರು ಇದ್ದರು.
ಮುಂದಿನ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ
ಕಾಂಗ್ರೆಸ್ 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ಪಕ್ಷದ ಭೂತ್‌ಮಟ್ಟದ ಸಮಿತಿಗಳನ್ನು ಸದೃಢಗೊಳಿಸಲಾಗುತ್ತಿದೆ. ಚಿಂತನ- ಮಂಥನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆಯೂ ಹೆಚ್ಚಾಗಿದ್ದು ಯಾವುದೇ ಇತರೆ ಪಕ್ಷದ ನಾಯಕರು ಪಕ್ಷ ಸೇರ್ಪಡೆಗೊಳ್ಳಲು ಬಯಸಿದ್ದಲ್ಲಿ ಸ್ಥಳೀಯ ಸಮಿತಿಯ ಅನುಮತಿ ಪಡೆಯಬೇಕಾಗುತ್ತದೆ. ಆ ನಿಟ್ಟಿನಲ್ಲಿ ಬ್ಲಾಕ್ ಮಟ್ಟದ ಸಮಿತಿಗಳ ತೀರ್ಮಾನವೇ ಅಂತಿಮ ಎಂದು ಎಂ.ಬಿ. ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.