ಬೆಂಗಳೂರು : ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಕುರಿತಾಗಿ ಸಾಫ್ಟ್ ನೇಚರ್ ತೋರುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.
ಬಿಜೆಪಿಯನ್ನು ಐಸಿಸ್‌ಗೆ ಹೋಲಿಸಿದ್ದ ಗೃಹಸಚಿವ ರಾಮಲಿಂಗಾರೆಡ್ಡಿಯವರ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ಐಸಿಸ್ ಉಗ್ರರ ಚಟುವಟಿಕೆ ನಿಂತಿದೆ. ಭಯೋತ್ಪಾದಕರ ಬಗ್ಗೆ ಏನೇ ವಿಚಾರ ಬಂದರೂ ಕಾಂಗ್ರೆಸ್ ಪಕ್ಷ ಕಠಿಣ ನಿಲವು ಹೊಂದಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಕಾರ್ಯಕರ್ತರನ್ನು, ಪಕ್ಷವನ್ನು ಐಸಿಸ್ ಉಗ್ರರ ಜತೆ ಹೋಲಿಕೆ ಮಾಡಿರುವುದು ಸರಿಯಲ್ಲ. ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಖಂಡಿಸುತ್ತೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸೋತಿದೆ. ಗೃಹ ಇಲಾಖೆ ಕೆಂಪಯ್ಯ ಹಿಡಿತದಲ್ಲಿ ಇರುವುದರಿಂದ ಪೊಲೀಸರಿಗೆ ಸ್ವಾತಂತ್ರ್ಯವೇ ಇಲ್ಲದಾಗಿದೆ. ರಾಮಲಿಂಗಾರೆಡ್ಡಿ ಗೃಹ ಸಚಿವರಾದ ನಂತರ ಬದಲಾವಣೆ ಆಗುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದರು.
ಕೆ.ಜೆ.ಜಾರ್ಜ್ ಗೃಹ ಸಚಿವರಾಗಿದ್ದಾಗ ಇದ್ದ ಪರಿಸ್ಥಿತಿಯೇ ಈಗಲೂ ಇದೆ. ಗೌರಿ ಲಂಕೇಶ್ ಹಂತಕರ ಶೋಧಕ್ಕೆ ರಚಿಸಿದ ಎಸ್‌ಐಟಿ ಕೆಲಸವೇ ಮಾಡುತ್ತಿಲ್ಲ. ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ರವಿ ಬೆಳಗೆರೆ ಪ್ರಕರಣವನ್ನು ಲಿಂಕ್ ಮಾಡುತ್ತಿ¨ªಾರೆ. ರವಿ ಬೆಳೆಗೆರೆ ಪ್ರಕರಣ ತನಿಖೆಗೆ ಪೊಲೀಸರ ಬೇರೆ ವಿಭಾಗ ಇದೆ. ಎಸ್‌ಐಟಿ ತನಗೆ ವಹಿಸಿದರೆ ಮೂಲ ಕರ್ತವ್ಯವನ್ನೇ ಮರೆಯಲಿದ್ದಾರೆ ಎಂದು ಆರೋಪಿಸಿದರು.
ಗೌರಿ ಹತ್ಯೆ, ರವಿ ಬೆಳಗೆರೆ ಪ್ರಕರಣ ಪ್ರತ್ಯೇಕವಾಗಿದ್ದು, ಸರ್ಕಾರ ವಿಷಯಾಂತರ ಮಾಡಲು ಹೊರಟಿದೆ. ರವಿ ಬೆಳಗೆರೆ ಪ್ರಕರಣವನ್ನು ತೋರಿಸಿ ಇದನ್ನೇ ದೊಡ್ಡದು ಮಾಡಿ, ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಎಸ್‌ಐಟಿ ತಂಡ, ಪೊಲೀಸ್ ಇಲಾಖೆ ಯಾರ ಹಿಡಿತದಲ್ಲಿದೇ ಎಂಬುದು ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ವಿರೋಧಿ, ರಾಜಧಾನಿಯನ್ನು ಗುಂಡಿಗಳ ನಗರವಾಗಿ ಮಾಡಿದ್ದಾರೆ. ವೈಟ್ ಟಾಪಿಂಗ್ ಹೆಸರಲ್ಲಿ ಹಣ ಲೂಟಿ ಮಾಡ್ತಿ¨ªಾರೆ ಎಂದು ದೂರಿದರು.
ಯಾತ್ರೆಯಿಂದ ಬಿಜೆಪಿ ಗೆಲುವು :
ಬಿಜೆಪಿ ಪರಿವರ್ತನಾ ರ್ಯಾಲಿಯಿಂದ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೂ ಲಾಭವಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಿದ್ದೇವೆ. ಗುಜರಾತ್ ಚುನಾವಣೆ ಬಳಿಕ ರಾಜ್ಯದಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ. ಬೇರೆ ಪಕ್ಷದ ಪ್ರಮುಖರು ಬಿಜೆಪಿ ಸೇರಲಿದ್ದಾರೆ. ಬಿಜೆಪಿ ಟಿಕೆಟ್ ಬಯಸಿ ಅನೇಕರು ಬರುತ್ತಿದ್ದಾರೆ. ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತಿದೆ. ಇದು ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ. ಮೂರು ಬಾರಿ ಸಮೀಕ್ಷೆ ನಡೆಸಿಯೇ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಅಂತಿಮಗೊಳಿಸಲಾಗುತ್ತದೆ. ಬೆಂಗಳೂರಿನಲ್ಲಿ 21 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.