ದೇವನಹಳ್ಳಿ: ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಸ ವಿಲೇವಾರಿ ಮಾಡಲು ಒತ್ತಾಯಿಸಿ ತಾಲೂಕಿನ ಅಣ್ಣೇಶ್ವರ ಗ್ರಾಪಂ ಕಚೇರಿ ಆವರಣದಲ್ಲಿ ತಾಲೂಕು ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.
ಗ್ರಾಪಂ ವ್ಯಾಪ್ತಿಗೆ ಒಳಪಡುವ 8 ಗ್ರಾಮಗಳಲ್ಲಿ ಚರಂಡಿ ಮತ್ತು ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ವಿವಿಧ
ತ್ಯಾಜ್ಯಗಳು ಸೇರಿ ಚರಂಡಿಗಳು ದುರ್ವಾಸನೆಯಿಂದ ಕೂಡಿದೆ. ಇದರಿಂದ ರಸ್ತೆಬದಿ ಓಡಾಡುವ ಸಾರ್ವಜನಿಕರು
ಹಾಗೂ ಗ್ರಾಮಸ್ಥರು ಮತ್ತು ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಮೂಗಿಗೆ ಕರವಸ್ತ್ರಗಳನ್ನು ಕಟ್ಟಿಕೊಂಡು
ಓಡಾಡಬೇಕಾದ ದುಸ್ಥಿತಿ ಬಂದೊದಗಿದೆ.
ಇದರಿಂದ ಗ್ರಾಮದ ಮಕ್ಕಳಿಗೆ ಮತ್ತು ವಯಸ್ಸಾದ ಮಕ್ಕಳಿಗೆ ಹಾಗೂ ಇತರರಿಗೆ ಈ ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಬರುವ ಭೀತಿಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಭಾರ್ಗವ್ ಮಾತನಾಡಿ, ಕಳೆದ 2 ತಿಂಗಳಿನಿಂದ ಗ್ರಾಪಂ ಅಧಿಕಾರಿಗಳು
ಇಲ್ಲದಿರುವುದರಿಂದ ಸ್ವತ್ಛತೆ ಇಲ್ಲದೆ ನಾರುಗೊಬ್ಬುತ್ತದೆ. ಶಾಲೆ ಆವರಣದಲ್ಲಿ ಕಸ ವಿಲೇವಾರಿ ಮಾಡದೆ ಕಸವಾಸನೆ
ಬರುತ್ತಿದ್ದರೂ ಗ್ರಾಪಂ ಅಧಿಕಾರಿಗಳು ತಮಗೆ ಏನೂ ತಿಳಿಯದಂತೆ ವರ್ತಿಸುತ್ತಿದ್ದಾರೆ.
ಕೂಡಲೇ ಚರಂಡಿಗಳನ್ನು ಸ್ವತ್ಛಗೊಳಿಸಬೇಕು. ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿ ಕಾಂಗ್ರೆಸ್ ಉಪಾಧ್ಯಕ್ಷ ಮಹೇಂದ್ರ, ಪ್ರೇಮ್‌ನಾಥ್, ಪ್ರಧಾನ ಕಾರ್ಯದರ್ಶಿ ಶರಣ್, ಹರೀಶ್, ಕಾರ್ಯದರ್ಶಿ ಮುನಿಶಾಮೇಗೌಡ, ಹರೀಶ್, ಪ್ರವೀಣ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಣ್ಣ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.