Advertisement

ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಕಂಟಕ; ಆರಗ ಭವಿಷ್ಯ

03:43 PM Oct 29, 2021 | Team Udayavani |

ಸಾಗರ: 2018ರಲ್ಲಿ ಯುಬಿ ಸಿಟಿ ಹೋಟೆಲ್‌ನಲ್ಲಿ ಗಲಾಟೆಯಾದಾಗ ನಲಪಾಡ್ ಮಿತ್ರರ ಜೊತೆ ಶ್ರೀಕೃಷ್ಣ ಸಿಕ್ಕಿಬಿದ್ದಿದ್ದನು. ವಿದ್ವತ್ ಎನ್ನುವವರಿಗೆ ಹೊಡೆದು ಎಲ್ಲರನ್ನು ಬಂಧಿಸಲಾಗಿತ್ತು. ಆಗ ಶ್ರೀಕೃಷ್ಣನನ್ನು ಬಂಧಿಸಿರಲಿಲ್ಲ. ಸರ್ಕಾರ ಉದ್ದೇಶಪೂರ್ವಕವಾಗಿ ಈತನನ್ನು ಬಿಟ್ಟಿತ್ತು. ಆದರೆ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಟ್ ಕಾಯಿನ್ ಪ್ರಕರಣದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಕಂಟಕ ಬಂದರೂ ಬರಬಹುದು ಎನ್ನುವುದು ಹಾಸ್ಯಾಸ್ಪದ ಸಂಗತಿ. ನಿಜಕ್ಕೂ ಕಂಟಕ ಬಂದಿರುವುದು ಕಾಂಗ್ರೆಸ್‌ಗೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭವಿಷ್ಯ ನುಡಿದರು.

Advertisement

ಶುಕ್ರವಾರ ಸಾಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಗೃಹ ಸಚಿವ ಕೆ.ಜೆ.ಜಾರ್ಚ್ ಆಗಲಿ ಅಂದು ಚಕಾರ ಎತ್ತಿರಲಿಲ್ಲ. ತಪ್ಪು ಮಾಹಿತಿಯಿಂದ ಸಿದ್ದರಾಮಯ್ಯ ಅವರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಎದುರು ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ. ಯುಬಿ ಹೋಟೆಲ್ ಗಲಾಟೆಯಲ್ಲಿ ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಬೆಳಕಿಗೆ ಬಂದಿದ್ದನು. ಆಗ ಸರ್ಕಾರ ಈತನನ್ನು ಯಾಕೆ ಬಂಧಿಸಿಲ್ಲ. ಯಾಕೆ ವಿಚಾರಣೆ ಮಾಡಿಲ್ಲ ಎನ್ನುವುದನ್ನು ಸಿದ್ದರಾಮಯ್ಯ ಹೇಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಶಾಸಕರ ಪುತ್ರ, ಶ್ರೀಕೃಷ್ಣನನ್ನು ಡ್ರಗ್ ಪ್ರಕರಣವೊಂದರಲ್ಲಿ ವಶಕ್ಕೆ ಪಡೆಯಲಾಗಿತ್ತು. ಆಗ ಶ್ರೀಕೃಷ್ಣ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಆತನ ವಿರುದ್ಧ ಚಾರ್ಜ್‌ಶೀಟ್ ಹಾಕಿ, ತನಿಖೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: ‘ಮತ್ತೆ ಬರುತ್ತೇನೆಂದ ಅಪ್ಪು ಬರಲೇ ಇಲ್ಲ..’ ಕಣ್ಣೀರಾದ ಕಲಬುರಗಿ ಜನತೆ!

ಶ್ರೀಕೃಷ್ಣ ವಿದೇಶದಲ್ಲಿ ಬಿಟ್ ಕಾಯಿನ್‌ಗೆ ಸಂಬಂಧಪಟ್ಟಂತೆ ಕೆಲವು ಹ್ಯಾಕ್ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇದಕ್ಕಾಗಿ ಇಂಟರ್‌ಪೋಲ್‌ಗೆ ಸಹ ನಮ್ಮ ಪೊಲೀಸರು ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ. ಇಬ್ಬರು ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆ ಬೀಟ್ ಕಾಯಿನ್ ಆರೋಪಿ ಇದ್ದಾನೆ. ಸಿದ್ದರಾಮಯ್ಯ ಅವರು ಪ್ರಕರಣದಲ್ಲಿ ಯಾವ್ಯಾವ ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂದು ಹೇಳಲಿ. ಅವರ ವಿರುದ್ಧ ಸಹ ನಮ್ಮ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಎಲೆಕ್ಷನ್‌ಗಾಗಿ ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next