ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಮಸ್ಕಿ ಗೆಲುವು “ಟಾನಿಕ್’ ಸಿಕ್ಕಂತಾಗಿದ್ದು ಬಸವ ಕಲ್ಯಾಣದಲ್ಲಿ ಅನುಕಂಪ “ಲಾಭ’ ದ ನಿರೀಕ್ಷೆ ಹುಸಿಯಾಗಿದೆ. ಬೆಳಗಾವಿಯಲ್ಲಿ ತೀವ್ರ ಸ್ಪರ್ಧೆ ಕೊಟ್ಟು ಶಕ್ತಿ ವೃದ್ಧಿಸಿಕೊಂಡ ತೃಪ್ತಿ ಸಿಕ್ಕಿದೆ.
ಎರಡು ದಿನಗಳ ಹಿಂದೆಯಷ್ಟೇ ದೊರೆತಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವಿನಿಂದ ಬೀಗುತ್ತಿದ್ದ ಕಾಂಗ್ರೆಸ್‌ಗೆ ಉಪ ಚುನಾವಣೆ ಫಲಿತಾಂಶ ದೊಡ್ಡ ಮಟ್ಟದ ಸಂತೋಷ ಕೊಟ್ಟಿಲ್ಲ. ಆದರೂ, ಬೆಳಗಾವಿಯ ಫಲಿತಾಂಶವಂತೂ ಸೋತಿದ್ದರೂ ನಾವೇ ಗೆದ್ದಂತೆ, ಗೆಲುವಿನ ಸನಿಹಕ್ಕೆ ಬಂದಿದ್ದೇವೆ. ಅಲ್ಲಿ ನಮ್ಮ ಸಾಧನೆ ಕಡಿಮೆಯೇನಿಲ್ಲ ಎಂದು ಕಾಂಗ್ರೆಸ್ ಬೀಗುವಂತಾಗಿದೆ.
ಮೇಲ್ನೋಟಕ್ಕೆ ನೋಡಿದರೆ ಕಾಂಗ್ರೆಸ್ ಮತಗಳಿಕೆ ಮೂರೂ ಕಡೆ ಕಡಿಮೆಯಾಗಿಲ್ಲ, ಪಕ್ಷಕ್ಕೂ ತೀವ್ರ ಹಿನ್ನಡೆ ಯಾಗಿಲ್ಲ. ಹೀಗಾಗಿ, ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಉಪ ಚುನಾವಣೆ ಫಲಿತಾಂಶ ಕೊಂಚ ಚೇತರಿಕೆಯ ಲಕ್ಷಣ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಸ್ಕಿಯಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯಿಂದ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿದ್ದ ಪ್ರತಾಪ ಗೌಡ ಪಾಟೀಲ್‌ಗೆ ಪಾಠ ಕಲಿಸಿ ಅವರು ಸಚಿವರಾಗುವ ಕನಸು ನುಚ್ಚು ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ ತುರವಿಹಾಳ ಅವರನ್ನು ಸೆಳೆದಿದ್ದು ಕಾಂಗ್ರೆಸ್‌ಗೆ ವರದಾನವಾಯಿತು. ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿ ಪ್ರಚಾರ ಮಾಡಿದ್ದರು.
ಬಸವಕಲ್ಯಾಣದಲ್ಲಿ ಸಹಜವಾಗಿ ನಾರಾಯಣರಾವ್ ಪತ್ನಿಗೆ ಟಿಕೆಟ್ ಕೊಟ್ಟು ಅನುಕಂಪ ಲಾಭದ ನಿರೀಕ್ಷೆಯಲ್ಲಿತ್ತು. ಆದರೆ, ಅಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂಬ ಆಕ್ರೋಶವೂ ಕೆಲಸ ಮಾಡಿದಂತಿದೆ. ಜೆಡಿಎಸ್ ಅಭ್ಯರ್ಥಿ ಮುಸ್ಲಿಂ ಮತ ವಿಭಜನೆ ಮಾಡಬಹುದು ಎಂಬ ಆತಂಕದಲ್ಲಿ ಮುಸ್ಲಿಂ ಮತ ಸೆಳೆಯಲು ಎಲ್ಲಾ ಮುಸ್ಲಿಂ ನಾಯಕರನ್ನು ಗುಡ್ಡೆ ಹಾಕಿಕೊಂಡು ಪ್ರಚಾರ ಮಾಡಿದರು. ಆದರೆ, ಇತರೆ ಸಮುದಾಯಗಳ ಮತ ಕೈ ತಪ್ಪಿದೆ. ಜೆಡಿಎಸ್ ಅಭ್ಯರ್ಥಿ ದೊಡ್ಡ ಮತ ಪಡೆದಿಲ್ಲ. ಆದರೆ, ಬಿಜೆಪಿ ಬಂಡಾಯ ಮಲ್ಲಿಕಾರ್ಜುನ ಖೂಬಾ ಸಹ ಕಾಂಗ್ರೆಸ್ ನಿರೀಕ್ಷೆಯಷ್ಟು ಮತ ಪಡೆದಿಲ್ಲ. ಅವರು 20 ಸಾವಿರ ಮತ ಪಡೆದು ಜೆಡಿಎಸ್ 5 ಸಾವಿರ ದಾಟಬಾರದು ಎಂಬ ನಿರೀಕ್ಷೆ ಕಾಂಗ್ರೆಸ್‌ನದ್ದಾಗಿತ್ತು. ಜೆಡಿಎಸ್ ಅಭ್ಯರ್ಥಿ 10 ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದು, ಇಲ್ಲಿ. ಕಾಂಗ್ರೆಸ್ ಲೆಕ್ಕಾಚಾರ ತಪ್ಪಿದೆ.
ಶಕ್ತಿ ವೃದ್ಧಿ: ಬೆಳಗಾವಿಯಲ್ಲಿ ಸತೀಶ್ ಜಾರಕಿಹೋಳಿ ಸ್ಪರ್ಧೆಯಿಂದ ಕಣ ಜಿದ್ದಾ ಜಿದ್ದಿಯಾಗಿತ್ತು. ಸಿಡಿ ಪ್ರಕರಣದ ನಂತರ ಜಾರಕಿಹೊಳಿ ಸಹೋದರರ ನಡೆಯೂ ನಿಗೂಢವಾಗಿದ್ದರಿಂದ ಕುತೂಹಲ ಕೆರಳಿಸಿತ್ತು. ಇಲ್ಲಿ ಸತೀಶ್ ಜಾರಕಿಹೊಳಿ ಹೊರತುಪಡಿಸಿ ಯಾರೇ ಅಭ್ಯರ್ಥಿಯಾಗಿದ್ದರೂ ಇಷ್ಟು ಪ್ರಮಾಣದ ಮತ ಬರುತ್ತಿರಲಿಲ್ಲ. ಇದೇ ಕಾರಣಕ್ಕೆ ಕಾರ್ಯತಂತ್ರ ರೂಪಿಸಿ ಸತೀಶ್ ಅವರನ್ನು ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್ ತಂತ್ರ ಇಲ್ಲಿ ಒಂದು ಲೆಕ್ಕ ದಲ್ಲಿ ಯಶಸ್ವಿಯಾಗಿದೆ. ಗೆಲುವು ಸಿಕ್ಕಿಲ್ಲ ಅಷ್ಟೇ.
ಒಟ್ಟಾರೆ, ಮೂರು ಕ್ಷೇತ್ರಗಳ ಫಲಿತಾಂಶ ಕಾಂಗ್ರೆಸ್‌ಗೆ ತೀವ್ರ ಬೇಸರವೂ ಇಲ್ಲ, ಹೆಚ್ಚು ಸಂತೋಷವೂ ಇಲ್ಲ ಎಂಬತಾಗಿದ್ದು, ಮಸ್ಕಿ ಗೆಲುವು, ಬೆಳಗಾವಿ ಮತಗಳಿಕೆ ಹೆಚ್ಚಳ ಸ್ವಲ್ಪ ಮಟ್ಟಿಗೆ “ಹುಮ್ಮಸ್ಸು’ ಮೂಡಿಸಿದೆ.
ಹೈಕಮಾಂಡ್‌ಗೆ ಮಾಹಿತಿ :
ಮೂರೂ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಆಡಳಿತ ವಿರೋಧಿ ಅಲೆ ಲಕ್ಷಣ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಉಪ ಚುನಾವಣೆ ಫಲಿತಾಂಶದಿಂದ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡು ತ್ತೇವೆಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
-ಎಸ್. ಲಕ್ಷ್ಮಿನಾರಾಯಣ