Advertisement
ಮೋದಿ ಮೋಡಿಯಲ್ಲಿ ದೇಶವೇ ಕರಗಿ ಹೋಗಿರುವ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಸಿಂಧಿಯಾ ಕಾಂಗ್ರೆಸ್ ನಾಯಕತ್ವದ ಮನೋಭಾವದಿಂದ ಬೇಸತ್ತು ಬಿಜೆಪಿಯತ್ತ ವಾಲಿದರು. ಆದರೆ, ಅವರು ಬಿಜೆಪಿ ಸೇರುವುದು ಖಚಿತವಾದಂತೆಯೇ, ಇತ್ತ ಕರ್ನಾಟಕದ ಕಾಂಗ್ರೆಸ್ “ನವೀಕರಣ’ ಕಾರ್ಯವನ್ನು ಹೈಕಮಾಂಡ್ ಎತ್ತಿಕೊಂಡಂತೆ ಕಾಣುತ್ತಿದೆ.
Related Articles
Advertisement
ಪ್ರತಿಪಕ್ಷ ಸ್ಥಾನಗಳಿಗೆ ಎಚ್.ಕೆ. ಪಾಟೀಲ್, ಡಾ. ಜಿ.ಪರಮೇಶ್ವರ್ ಮತ್ತಿತರ ಘಟಾನುಘಟಿಗಳು “ಕೈ’ಯೊಡ್ಡಿದ್ದರು. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಅಗತ್ಯ ಸಂದರ್ಭಗಳಲ್ಲಿ “ಬಂಡೆ’ಯಂತೆ ನಿಂತು ಸಹಕರಿಸಿದ, ಕಾಂಗ್ರೆಸ್‌ನ ಪ್ರಸ್ತುತ ಪ್ರಬಲ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷ ನಾಯಕತ್ವಕ್ಕೆ ಯತ್ನಿಸಿದರು. ಆದರೆ, ಅವರ ಪ್ರಮುಖ ಗುರಿ ಇದ್ದದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ. ಅದು ಅವರ ಮುಂದಿನ ಕನಸಿಗೆ (ಸಿಎಂ) ವೇದಿಕೆ ಆಗಬಹುದು ಎಂಬುದು ಆಶಯಯಾಗಿತ್ತು.
ಇನ್ನೊಂದೆಡೆ, ಕಾಂಗ್ರೆಸ್‌ನ ಹಿರಿಯರು ಸಿದ್ದರಾ ಮಯ್ಯ ವಿರುದ್ಧ, ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ನಡೆಸಿದರು ಎನ್ನಲಾದ ರಾಜಕೀಯ ನಡೆಗಳು ಹೈಕಮಾಂಡ್ ನಿಧಾನಗತಿಗೆ ಮತ್ತಷ್ಟು ಕಾರಣವಾದವು. ಕಾಂಗ್ರೆಸ್ ವೀಕ್ಷಕರು ರಾಜ್ಯಕ್ಕಾಗಮಿಸಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇವೆಲ್ಲಾ ಕಾರಣಕ್ಕಾಗಿ ಸಿದ್ದರಾ ಮಯ್ಯ ಅವರು ಪಕ್ಷದ ಹಿಡಿತವನ್ನು ಇನ್ನಷ್ಟು ಬಲಪಡಿ ಸಲು ತಾವು ರಾಜೀನಾಮೆ ಕೊಟ್ಟ ಪ್ರತಿಪಕ್ಷ ನಾಯಕ ಹುದ್ದೆಗೆ ಅಂಟಿಕೊಳ್ಳಲು ಮತ್ತೆ ಗಟ್ಟಿಯತ್ನ ನಡೆಸಿದರು.
ಒಂದು ವೇಳೆ, ಡಿ.ಕೆ.ಶಿವಕುಮಾರ್ ರಾಜ್ಯಾಧ್ಯಕ್ಷರಾದರೆ ತಮ್ಮದೇ ಬಣದವರನ್ನು ಮೂರು ಕಾರ್ಯಾಧ್ಯಕ್ಷ ಹುದ್ದೆಗಳಿಗೆ ನೇಮಿಸಿ ಪಕ್ಷದ ಮೇಲಿನ ತಮ್ಮ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸುವ ಪ್ರಯತ್ನ ನಡೆಸಿದರು. ಸಿದ್ದರಾಮಯ್ಯ ಪ್ರಬಲ “ಅಹಿಂದ’ ನಾಯಕ ಮತ್ತು ಕಾಂಗ್ರೆಸ್‌ನ “ಅಲುಗಾಡಿಸಲಾಗದ’ ಮುಖಂಡ ಎಂಬಂತೆ ಬೆಳೆದುಕೊಂಡಿದ್ದು ಹಾಗೂ ಉಪಚುನಾವಣಾ ಸಮರದ ಬಳಿಕ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಸ್ವತ: ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರು ಅವರನ್ನು ಭೇಟಿಯಾಗಿದ್ದು, ರಾಜಕೀಯವಾಗಿ ಬೇರೆಯದೇ ಸಂದೇಶವನ್ನು ಸಾರಿತು.
ಇತ್ತೀಚೆಗೆ ಯಡಿಯೂರಪ್ಪ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಘಟಾನುಘಟಿಗಳ ನಡುವೆ ತಾವೂ ಹೋಗಿ ಶುಭದ ಮಾತಾಡಿದ್ದು, ಇನ್ನೊಂದು ರೀತಿಯದೇ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ರವಾನಿಸಿತು. ಈಗ ಸಿದ್ದರಾಮಯ್ಯ ಅವರನ್ನು ಕಡೆಗಣಿಸದೆ, ಬಂಡೆಯಂತೆ ನಿಂತಿದ್ದ ಶಿವಕುಮಾರ್ ಅವರನ್ನೂ ವಿಶ್ವಾಸಕ್ಕೆ ಪಡೆದು ಕರ್ನಾಟಕ ಕಾಂಗ್ರೆಸನ್ನು ಕಳೆದುಕೊಳ್ಳಬಾರದು ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ.
ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಘೋಷಿಸಿದೆ. ಸಿದ್ದರಾಮಯ್ಯ ಬಣದ ಅಹಿಂದ ವರ್ಗದವವರನ್ನೇ ಮೂರು ಕಾರ್ಯಾಧ್ಯಕ್ಷ ಹುದ್ದೆಗಳಿಗೆ ನೇಮಿಸಿ ಅವರನ್ನೂ ಸಂತುಷ್ಟಗೊಳಿಸಿದೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ವಿರುದ್ಧ ನಡೆ ಅನುಸರಿಸಿದ್ದ “ಹಿರಿಯರನ್ನು’ ಲೆಕ್ಕಕ್ಕೆ ಇಟ್ಟುಕೊಳ್ಳದೆ ಒಟ್ಟಾರೆಯಾಗಿ ಒಕ್ಕಲಿಗ, ಲಿಂಗಾಯಿತ, ಅಹಿಂದ ವರ್ಗಗಳನ್ನು ಒಟ್ಟಾಗಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಕೈಹಾಕಿದೆ.
ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಉಳಿದಿರುವ ಗುರಿಗಳು… ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು. ಕುಟುಂಬ ರಾಜಕೀಯದಲ್ಲೇ ಕಾಲಕಳೆಯುತ್ತಿರುವ ಜೆಡಿಎಸ್ ಪಕ್ಷದ “ಒಕ್ಕಲಿಗ’ ಮತಬ್ಯಾಂಕನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ತರುವುದು, ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸು ವುದು. ಕಾನೂನು ಕುಣಿಕೆ ತಪ್ಪಿಸಿಕೊಳ್ಳುವುದು.
ಈ ನಡುವೆ, ಕಾಂಗ್ರೆಸ್‌ನಲ್ಲಿ ಮೂರು ಪವರ್ ಸೆಂಟರ್‌ಗಳು ಹುಟ್ಟಿಕೊಂಡಿವೆ. ಒಂದು ಡಿ.ಕೆ. ಶಿವಕುಮಾರ್, ಇನ್ನೊಬ್ಬರು ಸಿದ್ದರಾಮಯ್ಯ ಹಾಗೂ ಮೂರನೆಯವರೇ “ಹಿರಿಯ’ ಕಾಂಗ್ರೆಸಿಗರು. ಅಧ್ಯಕ್ಷರಾಗಿ ಉಳಿದೆರಡು ಪವರ್ ಸೆಂಟರ್‌ಗಳನ್ನು ನಿಭಾಯಿಸಲಿದ್ದಾರೆ ಎನ್ನುವುದಕ್ಕೆ ಮುಂದಿನ ರಾಜಕೀಯ ದಿನಮಾನಗಳು ಸಾಕ್ಷಿಯಾಗಲಿವೆ.
* ನವೀನ್ ಅಮ್ಮೆಂಬಳ