ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗದ್ದಲ ಈಗಲೇ ಉದ್ಭವಿಸಿರುವುದರಿಂದ ಹಿರಿಯ ನಾಯಕರೆಲ್ಲ ದಿಲ್ಲಿ ಯಾತ್ರೆ ಆರಂಭಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನಂತರ ಡಾ| ಜಿ. ಪರಮೇಶ್ವರ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸಹಿತ ಪ್ರಮುಖ ನಾಯಕ ರೆಲ್ಲರೂ ಹೈಕಮಾಂಡ್ ಭೇಟಿಗೆ ನಿರ್ಧರಿಸಿದ್ದಾರೆ. ಇದ ಕ್ಕಾಗಿ ಸಮಯವನ್ನೂ ಕೇಳಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ ಮತ್ತು ಬಿ.ಕೆ. ಹರಿಪ್ರಸಾದ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿ ದ್ದಾರೆ. ಪಕ್ಷದೊಳಗಿನ ಗೊಂದಲಗಳ ಬಗ್ಗೆ ಮತ್ತು ಮುಂದಿನ ಸಿಎಂ ಬಗ್ಗೆ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯ ಕುರಿತು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಬೆಳವಣಿಗೆಗಳ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ ಮತ್ತು ಬಿ.ಕೆ. ಹರಿಪ್ರಸಾದ್ ಅವರು ಶನಿವಾರ ಸಂಜೆ ಸಭೆ ನಡೆಸಿ ಚರ್ಚೆ ನಡೆಸಿದ್ದರು.
ಮುನಿಯಪ್ಪ ಮತ್ತು ಹರಿಪ್ರಸಾದ್ ರವಿವಾರ ಸಂಜೆ ದಿಲ್ಲಿಗೆ ತೆರಳಿದ್ದಾರೆ. ಪರಮೇಶ್ವರ್ ಮುಂದಿನ ವಾರ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಮಯ ಕೇಳಿದ್ದಾರೆ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗಷ್ಟೇ ದಿಲ್ಲಿಗೆ ತೆರಳಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ, ಸಿದ್ದರಾಮಯ್ಯ ಬೆಂಬಲಿಗರ ನಡೆಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಗೊಂದಲಗಳ ಕುರಿತು ಮಾಹಿತಿ ನೀಡಿ ಬಂದಿದ್ದರು. ಇದರ ಬೆನ್ನಲ್ಲೇ ಮಾಜಿ ಸಚಿವ ಎಚ್.ಕೆ. ಪಾಟೀಲ್ ಕೂಡ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಸ್ವಯಂಪ್ರೇರಿತ ದೂರು
ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಕುರಿತು ಬಹಿರಂಗ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿಯು ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡಿದ್ದು, ಈ ಶಾಸಕರ ಬಗ್ಗೆ ದಾಖಲೆ ಗಳನ್ನು ಸಂಗ್ರಹಿಸಲು ಮುಂದಾಗಿದೆ. ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿ ರವಿವಾರ ವರ್ಚುವಲ್ ಸಭೆ ನಡೆಸಿತು. ಇತ್ತೀಚೆಗೆ ಕೆಲವು ಶಾಸಕರು ಮುಂದಿನ ಮುಖ್ಯಮಂತ್ರಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ಸಿಎಂ ಹೇಳಿಕೆ ಶಿಸ್ತು ಉಲ್ಲಂಘನೆ. ಈ ಬಗ್ಗೆ ಸುದೀರ್ಘ ಚರ್ಚೆ ಆಗಿದೆ ಎಂದು ರೆಹಮಾನ್ ಖಾನ್ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.