Advertisement

ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದು ತಲೆಬಿಸಿ

09:58 AM Aug 28, 2019 | Team Udayavani |

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅಭಿಪ್ರಾಯಕ್ಕೆ ಮಣೆ ಹಾಕದಿದ್ದರೆ ರಾಜ್ಯದಲ್ಲಿ ಪಕ್ಷದ ಮೇಲೆ ಉಂಟಾಗುವ ಪರಿಣಾ ಮಗಳೇನಾಗ ಬಹುದು ಎಂಬುದರ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಲೆಕ್ಕಾಚಾರದಲ್ಲಿ ತೊಡಗಿದೆ.

Advertisement

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ವಿಚಾರದಲ್ಲಿ ಹೈಕಮಾಂಡ್‌ ಮಾತಿಗೆ ಮಣಿದು ಸುಮ್ಮನಾಗಿದ್ದ ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ‘ರಾಂಗ್‌’ ಆಗಿದ್ದಾರೆ. ದೇವೇಗೌಡರ ಕುಟುಂಬದ ಮೇಲೂ ನೇರ ಕದನಕ್ಕೆ ಇಳಿದಿದ್ದಾರೆ. ಈ ಹಂತದಲ್ಲಿ ಅವರನ್ನು ಬಿಟ್ಟು ಬೇರೊಬ್ಬರಿಗೆ ಮಣೆ ಹಾಕಿದರೆ ಪಕ್ಷಕ್ಕಾಗುವ ಲಾಭ-ನಷ್ಟದ ಬಗ್ಗೆ ದೆಹಲಿ ಕಾಂಗ್ರೆಸ್‌ ನಾಯಕರು ತಲೆಕೆಡಿಸಿಕೊಂಡಿದ್ದಾರೆ.

ಒಂದೆಡೆ, ಕೆಪಿಸಿಸಿ ಅಧ್ಯಕ್ಷಗಿರಿ ಹಾಗೂ ಪ್ರತಿಪಕ್ಷ ನಾಯಕ ಸ್ಥಾನವನ್ನು ಸಿದ್ದರಾಮಯ್ಯ ಹಿಡಿತದಿಂದ ತಪ್ಪಿಸಬೇಕು ಎಂದು ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಇಂಥ ತೀರ್ಮಾನ ಕೈಗೊಂಡರೆ ಸಿದ್ದರಾಮಯ್ಯ ‘ರೆಬಲ್’ ಆಗಬಹುದಾ ಎಂಬ ಅನುಮಾನವೂ ಹೈಕಮಾಂಡ್‌ಗಿದೆ ಎನ್ನಲಾಗಿದೆ. ಏಕೆಂದರೆ ಇತ್ತೀಚೆಗೆ ಸಿದ್ದರಾಮಯ್ಯ ಮತ್ತೆ ಅಹಿಂದ ಸಂಘಟನೆಯತ್ತ ಗಮನಹರಿಸಿರುವುದು ಹಾಗೂ ಆಪ್ತರ ಜತೆ ಈ ವಿಚಾರ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ , ಹರಿ ಪ್ರಸಾದ್‌ ಅವರೊಂದಿಗೂ ಈಗಾಗಲೇ ಹೈಕಮಾಂಡ್‌ ನಾಯಕರು ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ವರ್ಷ ದೊಳಗೆ ವಿಧಾನಸಭೆ ಚುನಾವಣೆ ಎದುರಾದರೆ, ಪಕ್ಷದೊಳಗಿನ ಯಾವುದೇ ಬದಲಾವಣೆಯಿಂದ ಸಮಸ್ಯೆಯಾಗಬಹುದು. ಸಿದ್ದರಾಮಯ್ಯ ಮೌನ ವಾದರೂ ಕಷ್ಟ, ಕಠಿಣ ತೀರ್ಮಾನ ಕೈಗೊಂಡ ರಂತೂ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬ ಆತಂಕವನ್ನೂ ಕೆಲ ಶಾಸಕರು ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿಗೆ ಮೂಲ ಕಾಂಗ್ರೆಸ್ಸಿಗರನ್ನು ನೇಮಿಸಿ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅಥವಾ ಅವರು ಸೂಚಿಸಿದವರನ್ನೇ ಮಾಡಬಹುದು. ಎಂಬ ಲೆಕ್ಕಾಚಾರವೂ ಇದೆ. ಇಲ್ಲವೇ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಇಲ್ಲವೇ ಕೃಷ್ಣ ಬೈರೇಗೌಡರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಿ, ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಕೊಟ್ಟು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯಗೆ ನೀಡಬೇಕೆಂಬ ಅಭಿಪ್ರಾಯವೂ ಇದೆ. ಒಟ್ಟಾರೆ, ಸೋನಿಯಾ ಹಾಗೂ ರಾಹುಲ್ ಅವರು ಮೊದಲಿಗೆ ಶಾಸಕರ ಅಭಿಪ್ರಾಯ ಪಡೆದು ನಂತರ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಚಿಂತಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ವಿದ್ಯಮಾನದತ್ತಲೂ ದೃಷ್ಟಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದ ವಿದ್ಯಮಾನಗಳನ್ನೂ ಕಾಂಗ್ರೆಸ್‌ ಹೈಕಮಾಂಡ್‌ ಸೂಕ್ಷ್ಮವಾಗಿ ಗಮನಿಸುತ್ತಿದೆ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಿಂದ ಉಂಟಾಗಬಹುದಾದ ಆಂತರಿಕ ಸಂಘರ್ಷ, ಪ್ರಮುಖ ನಾಯಕರ ನಡೆ ಬಗ್ಗೆಯೂ ಮಾಹಿತಿ ಪಡೆಯುತ್ತಿದೆ. ಜತೆಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರದ ವಿದ್ಯಮಾನಗಳು, ಈ ಹಂತದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣ ಏನಿರಬಹುದು ಎಂಬ ಬಗ್ಗೆಯೂ ರಾಜ್ಯ ಕಾಂಗ್ರೆಸ್‌ ನಾಯಕರಿಂದ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ.
-ಎಸ್‌. ಲಕ್ಷ್ಮಿನಾರಾಯಣ
Advertisement

Udayavani is now on Telegram. Click here to join our channel and stay updated with the latest news.

Next