ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ನಾಯಕರು ಭಾನುವಾರ ಮಹತ್ವದ ಸಭೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕೆ ಕೈಗೊಳ್ಳಬೇಕಾದ ಹೊಸ ರಣ ತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ನಂತರ ನಡೆದ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಮಿತಿ ಸಭೆ ಸೋನಿಯಾ ಗಾಂಧಿ ನೇತೃತ್ವದಲ್ಲಿ 10 ಜನಪಥ್‌ನಲ್ಲಿ ನಡೆಯಿತು.
ಪ್ರತಿಪಕ್ಷಗಳ ಜತೆಗೂಡಿ ಸರ್ಕಾರದ ವಿರುದ್ಧ ಹೋರಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಮನೀಶ್ ತಿವಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
”ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ಉಕ್ರೇನ್‌ನಿಂದ ಹಿಂತಿರುಗುವ ವೈದ್ಯಕೀಯ ವಿದ್ಯಾರ್ಥಿಗಳ ಕುರಿತು, ರೈತರ ಎಂಎಸ್‌ಪಿ , ಹಣದುಬ್ಬರ, ನಿರುದ್ಯೋಗ, ಸಮಸ್ಯೆಗಳನ್ನು ಪ್ರಸ್ತಾಪಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಉತ್ತರ ಪ್ರದೇಶದಲ್ಲಿ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಇಡೀ ಯುಪಿಯಲ್ಲಿ ಶೇ.2.4ರಷ್ಟು ಮತಗಳನ್ನು ಮಾತ್ರ ಪಡೆದಿದೆ. ಯುಪಿಯ 380 ಸೀಟುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಂಡಿದ್ದಾರೆ.
ಪಕ್ಷದೊಳಗೆ ಹೆಚ್ಚಿದ ಬದಲಾವಣೆಯ ಒತ್ತಡ
ಭಾರಿ ಸೋಲಿನ ನಂತರ, ಕೇರಳ ಸಂಸದ ಶಶಿ ತರೂರ್ ಸೇರಿದಂತೆ ಹಲವು ನಾಯಕರು ಈಗಾಗಲೇ ಉನ್ನತ ಮಟ್ಟದಲ್ಲಿ ಬದಲಾವಣೆಗೆ ಒತ್ತಾಯಿಸಿದ್ದಾರೆ. ಆದರೆ, ಕರ್ನಾಟಕದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ.ಶಿವಕುಮಾರ್ ಅವರು ಗಾಂಧಿ ಕುಟುಂಬದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೋಲಿನ ಬಳಿಕ ಯುಪಿ ಕಾಂಗ್ರೆಸ್‌ನ ಹಲವು ನಾಯಕರು ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ.
ಮತ್ತೊಂದೆಡೆ, ಯುಪಿ ಕಾಂಗ್ರೆಸ್‌ನ ಎಲೆಕ್ಟ್ರಾನಿಕ್ ಮಾಧ್ಯಮ ಸಂಯೋಜಕ ಜೀಶನ್ ಹೈದರ್ ಅವರನ್ನು ನಾಯಕತ್ವದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ.