ರಾಯಚೂರು: ಕಾಂಗ್ರೆಸ್ ನಾಯಕರ ಧೋರಣೆ ನೋಡುತ್ತಿದ್ದಾರೆ ಪಾಕಿಸ್ತಾನಕ್ಕೆ ಜಯವಾಗಲಿ ಎನ್ನುವ ಮನಸ್ಥಿತಿಗೆ ತಲುಪಿದ್ದಾರೆ ಎನ್ನುವಂತಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರ ಪರ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವುದು ಶೋಚನೀಯ. ನೆರೆ, ಬರದ ಚರ್ಚೆ ಮಾಡುವುದು ಬಿಟ್ಟು ದೇಶದ್ರೋಹಿಗಳ ವಿಚಾರವಾಗಿ ಸದನ ಬಹಿಷ್ಕರಿಸಿದ್ದಾರೆ. ಈ ವಿಚಾರದಲ್ಲಿ ನಾವು ಕೈ ಕಟ್ಟಿ ಕೂಡುವುದಿಲ್ಲ ಎಂದರು.
ಕಾಂಗ್ರೆಸ್ ನವರು ಭಾರತವನ್ನು, ಪಾಕಿಸ್ತಾನಕ್ಕೆ ಒತ್ತೆ ಇಡುವ ಹಂತಕ್ಕೆ ತಲುಪಿದ್ದಾರೆ. ಕಾಂಗ್ರೆಸ್ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರೂ ಅದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಪಾಕಿಸ್ತಾನ ಪರ ಘೋಷಣೆ ಹಾಕಿದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಜ್ಮಲ್ ಕಸಬ್ ನನ್ನು ಹಿಂದು ಎಂದು ಬಿಂಬಿಸಲು ಮುಂದಾಗಲಾಗಿತ್ತು ಎಂಬ ಅಂಶ ಬಯಲಾಗಿದೆ. ಕಸಬ್ ಗೆ ಬೆಂಗಳೂರಿನ ವಿಳಾಸವಿತ್ತು ಎಂಬ ಮಾಹಿತಿ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಸದನದಲ್ಲಿ ಚರ್ಚಿಸುವ ಉದ್ದೇಶದಿಂದಲೇ ಜಗದೀಶ ಶೆಟ್ಟರ್ ಮನೆಯಲ್ಲಿ ಸಭೆ ನಡೆಸಲಾಗಿತ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಅವರಿಗೆ ತೊಂದರೆ ಮಾಡುವ ಉದ್ದೇಶದಿಂದ ಸಭೆ ನಡೆಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನವರಿಗೆ ಬಳ್ಳಾರಿ ಜಿಲ್ಲೆಯ ಹೆಸರು ಕೆಡಿಸುವ ಖಯಾಲಿ ಇದೆ. ಇದೇ ಆನಂದ್ ಸಿಂಗ್, ನಾಗೇಂದ್ರ ಅವರು ಕಾಂಗ್ರೆಸ್ ನಿಂದ ನಿಂತು ಗೆದ್ದಾಗ ಪ್ರಾಮಾಣಿಕರಾಗಿದ್ದರು. ಈಗ ಬಿಜೆಪಿಯಿಂದ ಸಚಿವರಾದ ಕೂಡಲೇ ಕಳಂಕಿತರೇ..? ಆನಂದಸಿಂಗ್ ವಿರುದ್ಧ ಇರುವುದು ಆರೋಪಗಳಷ್ಟೆ. ಮೇಲಾಗಿ ಅವರು ಬಿಜೆಪಿಯ ನಿಷ್ಠಾವಂತ ಮುಖಂಡರು ಎಂದು ತಿಳಿಸಿದರು.