ಬಾಗಲಕೋಟೆ/ಬೆಳಗಾವಿ: ಕಳೆದ ಬಾರಿ ರಾಜ್ಯಕ್ಕೆ ಬಂದಾಗ ಮೈತ್ರಿ ಸರಕಾರ ಮತ್ತು ಕಾಂಗ್ರೆಸ್ ನಾಯಕ ರಿಗೆ “ಸೈನಿಕರ ಫಿರಂಗಿ’ಯಿಂದ ತಿವಿದು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲಿಂಗಾಯತ ಧರ್ಮ ಪ್ರಸ್ತಾವಿಸಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ್ ನಡುವೆ “ಕ್ಷಮೆ’ ಸಮರ ನಡೆದ ಬೆನ್ನಲ್ಲೇ ಮೋದಿ ಮೊನಚಿನ ಮಾತು ರಾಜ ಕೀಯದ ಇನ್ನೊಂದು ಮಜಲು ತಲುಪಿದೆ.
ಗುರುವಾರ ಬಾಗಲಕೋಟೆಯಲ್ಲಿ ವಿಜಯ ಪುರ- ಬಾಗಲಕೋಟೆ ಲೋಕ ಸಭೆ ಕ್ಷೇತ್ರದ ಚುನಾವಣೆ ಪ್ರಚಾರ ಸಮಾ ವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ ಬಂದಾಗ ಸಮಾಜ ಒಡೆ ಯುವ ವಿಷ ಬೀಜ ಬಿತ್ತುತ್ತದೆ. ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಸಹೋದರರಂತೆ ಬಾಳುತ್ತಿದ್ದ ಲಿಂಗಾಯತ ಧರ್ಮ ಒಡೆಯಲು ಪ್ರಯತ್ನಿಸಿದರು. ಈ ಬಾರಿಯೂ ಇದೇ ವಿಷಯ ಪ್ರಸ್ತಾವಿಸಿ ಮತ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಸಚಿವರು ಪ್ರತ್ಯೇಕ ಧರ್ಮ ಕುರಿತಂತೆ ಪರಸ್ಪರ ಗುದ್ದಾಡು ತ್ತಿದ್ದಾರೆ. ತಾಯಿ ಎದೆ ಹಾಲು ಕುಡಿದು ಎರಡು ಭಾಗ ವಾಗಿ ವಿಭಜಿಸಿದ್ದಲ್ಲದೇ ವಿಷ ಬೆರೆಸಲು ಯತ್ನಿಸಿದರು ಎಂದು ಆರೋಪಿಸಿದರು.
ಒಂದು ದೇಶಕ್ಕೆ ಒಬ್ಬರೇ ಪ್ರಧಾನಿ ಇರಬೇಕು. ಜಮ್ಮು ಕಾಶ್ಮೀರಕ್ಕೆ ಇನ್ನೊಬ್ಬರು ಪ್ರಧಾನಿ ಬೇಕು ಎಂಬ ಕೂಗಿಗೆ ಮತದಾನದ ಮೂಲಕವೇ ಉತ್ತರ ನೀಡಬೇಕು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ಧ್ಯೇಯ. ಹಾಗೆಯೇ “ಸಬ್‌ಕೋ ಸಮ್ಮಾನ್’ ಎಂಬುದು ನಮ್ಮ ಪ್ರಾಣ. ಎ.23ರಂದು ಕಮಲಕ್ಕೆ ಮತ ಹಾಕುವ ಮೂಲಕ ಮೋದಿ ಖಾತೆಗೆ ಮತ ಹಾಕಿ ಎಂದು ಮನವಿ ಮಾಡಿದರು.
ದೇಶದ ಇತಿಹಾಸದಲ್ಲೇ ಭಯೋತ್ಪಾದಕರಿಗೆ ದಿಟ್ಟ ಉತ್ತರ ಕೊಡುವ ನಿರ್ಧಾರ ಕೈಗೊಂಡಿರಲಿಲ್ಲ. ನಾವು ಬಾಲಾಕೋಟ್‌ನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದರೆ, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್‌ನವರಿಗೆ ನೋವು ಆಗಿತ್ತು. 2009ರಲ್ಲಿ ಮುಂಬಯಿಯ ತಾಜ್ ಹೊಟೇಲ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್, ಈ ದಾಳಿಯಲ್ಲಿ ಪಾಕಿಸ್ಥಾನದವರು ಶಾಮೀಲಾಗಿದ್ದಾರೆ ಎಂದು ಕಣ್ಣೀರು ಹಾಕಿ ಸುಮ್ಮನೆ ಕುಳಿತಿತ್ತು. ಆದರೆ ದೇಶದ ಜನರು 2014ರಲ್ಲಿ ಮಜಬೂತ್ ಸರಕಾರ ಅಧಿಕಾರಕ್ಕೆ ತಂದರು. ಹೀಗಾಗಿ ನಾನು ದೇಶಭಕ್ತಿ, ನಿಯತ್ತು ಮತ್ತು ಗಟ್ಟಿ ನಿರ್ಧಾರದಿಂದ ಕೈಗೊಂಡ ಕ್ರಮದಿಂದ ಪಾಕಿಸ್ಥಾನ ಭಯಗೊಂಡಿದೆ. ಮೋದಿ ನಮಗೆ ಹೊಡೆಯುತ್ತಾನೆ, ನಮ್ಮನ್ನು ಕಾಪಾಡಿ, ನಮ್ಮನ್ನು ಉಳಿಸಿ, ಉಳಿಸಿ ಎಂದು ಬೇಡಿಕೊಳ್ಳುತ್ತಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಗಡಿ ದಾಟಿ ನುಗ್ಗಿ ಪಾಠ ಕಲಿಸಲಾಗಿದೆ. ನಾವು ಉಗ್ರರ ನೆಲೆ ಮೇಲೆ ದಾಳಿ ನಡೆಸಿದರೆ ಇಲ್ಲಿನ ಕಾಂಗ್ರೆಸ್-ಜೆಡಿಎಸ್‌ನವರು ಅನುಮಾನಿಸಿದರು. ನಂಬಲಾಗದೇ ಬಾಲಾಕೋಟ್, ಬಾಗಲಕೋಟ್ ಎಂದು ಗೂಗಲ್‌ನಲ್ಲಿ ಹುಡುಕಾಡಿದರು. ಬಾಲಾಕೋಟ್ ಎಲ್ಲಿ ಬರುತ್ತದೆ ಎಂದು ತಿಳಿಯದೆ ಪ್ರಯಾಸಪಟ್ಟರು ಎಂದರು.
ನೀರು-ನೀರಾವರಿಗೆ ಪ್ರತ್ಯೇಕ ಜಲಶಕ್ತಿ ಸಚಿವಾಲಯ
ನಮ್ಮ ಸರಕಾರ ಮತ್ತೆ ಅಧಿ ಕಾರಕ್ಕೆ ಬಂದರೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗೆ ಮೊದಲ ಪ್ರಾಶಸ್ತÂ ನೀಡಲಾಗುವುದು. ಇವುಗಳ ನಿರ್ವಹಣೆಗೆ ಪ್ರತ್ಯೇಕ ಜಲಶಕ್ತಿ ಸಚಿವಾಲಯ ಸ್ಥಾಪನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ಚಿಕ್ಕೋಡಿಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿಗಳ ಪರ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಮಾತನಾಡಿದ ಅವರು, ರೈತರ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಮತ್ತು ಪಕ್ಷ ಬದ್ಧವಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರಕಾರ ವಿದ್ಯುತ್ ಸೌಲಭ್ಯ ಒದಗಿಸಲು ವಿಶೇಷ ಆದ್ಯತೆ ನೀಡಿದೆ. ಸೋಲಾರ್ ವ್ಯಾಪಕ ಬಳಕೆಗೆ ವಿಶೇಷ ಪ್ರಾಶಸ್ತÂ ನೀಡಲಾಗುವುದು ಎಂದವರು ಹೇಳಿದರು.