ಬೆಂಗಳೂರು: ಡಾ|| ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಇನ್ನು 100 ವರ್ಷಗಳ ನಂತರವೂ ಅಂಬೇಡ್ಕರ್ ಅವರ ವಿಚಾರಗಳು ಈ ದೇಶಕ್ಕೆ ಬೇಕಾಗಿವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಡಾ|| ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಕೂಲ್ ಬೆಲ್ ಹೊಡೆಯುವ ವ್ಯಕ್ತಿಯನ್ನು ಅಂಬೇಡ್ಕರರ ವಿರುದ್ಧ ಚುನಾವಣೆಗೆ ನಿಲ್ಲಿಸಿ ಎರಡು ಬಾರಿ ಸೋಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರರ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು.
ಅಂಬೇಡ್ಕರ್ ಅವರು ಅವರೊಬ್ಬ ಮಹಾನ್ ವ್ಯಕ್ತಿ. ಅವರು ಅನುಭವಿಸಿದ ಶೋಷಣೆ, ಕಷ್ಟ, ಅವಮಾನವನ್ನು ಬೇರೆ ಯಾರು ಅನುಭವಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಮಾತಿಗೆ ಗೌರವ ಸಿಗದಿದ್ದರೆ, ಸ್ವಲ್ಪ ಅವಮಾನ ಆದರೆ ಅಥವಾ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು, ನಿಷ್ಕ್ರಿಯರಾಗುವುದನ್ನು ನಾವು ಇಂದು ಕಾಣುತ್ತೇವೆ. ಆದರೆ ಅಂಬೇಡ್ಕರ್ ಅವರು ಅವಮಾನ ಆದಾಗಲೆಲ್ಲ ಹೆಚ್ಚು ಸಕ್ರಿಯರಾದರು. ಜೀವನ ಪೂರ್ತಿ ಅವರು ಕಾಂಗ್ರೆಸ್ ವಿರುದ್ಧ ಚಳವಳಿ ಮಾಡಿದರು. ಈ ದೇಶದಲ್ಲಿ ಪರಿವರ್ತನೆ ತರಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ ಎಂಬ ಚಿಂತನೆ ಅವರದಾಗಿತ್ತು ಎಂದು ವಿವರಿಸಿದರು.
ಇದನ್ನೂ ಓದಿ:ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ನಾಯಕರು ವಶಕ್ಕೆ
ಗಾಂಧೀಜಿ ತಮ್ಮಿಂದ ವಯಸ್ಸಿನಲ್ಲಿ ಹಿರಿಯರಾದರೂ ಹೇಳುವ ವಿಚಾರವನ್ನು ನೇರವಾಗಿ ಹೇಳುವ ದಿಟ್ಟತನವನ್ನು ಅಂಬೇಡ್ಕರರು ಹೊಂದಿದ್ದರು. ಮಹಾನ್ ಓದುಗ, ದೇಶವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಪ್ರಾಮಾಣಿಕ ವ್ಯಕ್ತಿ ಅವರಾಗಿದ್ದರು ಎಂದು ರವಿಕುಮಾರ್ ಹೇಳಿದರು.
ಅಂಬೇಡ್ಕರ್ ವಿಚಾರಧಾರೆಯನ್ನು ಬಿಜೆಪಿ ಸಂಪೂರ್ಣವಾಗಿ ಅಳವಡಿಸಿಕೊಂಡಿದೆ. ಬಡವರಿಗೆ ಸರಕಾರದಿಂದ ಸಹಾಯ ಆಗಬೇಕೆಂಬ ಅಂಬೇಡ್ಕರ ವಿಚಾರಧಾರೆಯನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಯೋಜನೆಗಳ ಮೂಲಕ ಜಾರಿಗೊಳಿಸಿವೆ ಎಂದು ವಿವರಿಸಿದರು.