Advertisement

BJP- JDS ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟವಿಲ್ಲ: ಸಚಿವ ಮಹದೇವಪ್ಪ

04:58 PM Sep 24, 2023 | Team Udayavani |

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ ಮೈತ್ರಿ ಮಾಡಿಕೊಳ್ಳುವುದರಿಂದ ಕಾಂಗ್ರೆಸ್‌ಗೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2018ರ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ ಆಂತರಿಕವಾಗಿ ಒಪ್ಪಂದ ಮಾಡಿಕೊಂಡಿದ್ದರಿಂದಾಗಿ ಮತಗಳು ಒಂದಾಗಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಈಗ ಇವರೆರಡೂ ಪಕ್ಷಗಳು ಅಧಿಕೃತವಾಗಿ ಒಂದಾಗುತ್ತಿದ್ದಾರೆ. ಇದರಿಂದಾಗಿ ಯಾವ ತೊಂದರೆ, ಪರಿಣಾಮ ಉಂಟಾಗುವುದಲ್ಲ ಎಂದು ಹೇಳಿದರು.

ಕಾಂಗ್ರೆಸ್ ಕರ್ನಾಟಕದಲ್ಲಿ ಬಲವಾಗಿದೆ. ನಿರೀಕ್ಷೆಯಂತೆ ಮತ್ತಷ್ಟು ಗಟ್ಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಗತ್ಯ ಖರ್ಚು ತಡೆದು ದಸರಾ ಆಚರಣೆ: ಅನಗತ್ಯವಾದ ಖರ್ಚು ಕಡಿಮೆ ಮಾಡಿ ಹಾಗೂ ಹಣಕಾಸು ಸ್ಥಿತಿಯನ್ನು ನೋಡಿ ಕಾರ್ಯಕ್ರಮಗಳನ್ನು ರೂಪಿಸಿ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲಾಗುವುದು ಎಂದು ಅವರು ಹೇಳಿದರು.

ಅದ್ಧೂರಿ ಹಾಗೂ ಸರಳವೂ ಅಲ್ಲದ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತೇವೆ. ದಸರಾ ಮಹೋತ್ಸವಕ್ಕೆ ತನ್ನದೇ ಚಾರಿತ್ರಿಕ ಹಿನ್ನೆಲೆ, ಚರಿತ್ರೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದ ಈತನಕ ಆಗಿರುವ ಅಭಿವೃದ್ಧಿ, ಸಾಧನೆ ಇರುತ್ತದೆ ಎಂದರು.

Advertisement

ಹಣಕಾಸು ನಿಗದಿ ಮತ್ತು ಕೆಲವು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಕಾರ್ಯಕ್ರಮ ರೂಪಿಸುತ್ತೇವೆ. ಅನಗತ್ಯ ಕಡಿವಾಣ ಹಾಕಿಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ದೂರಿ ದಸರಾ ಮಾಡೋಣವೆಂದು ಹೇಳಿದ್ದರು. ಆದರೆ, ಈಗ 120 ವರ್ಷಗಳ ನಂತರದಲ್ಲಿ ಬರಗಾಲ ಕಾಣಿಸಿಕೊಂಡು ರೈತರು ಕಷ್ಟದಲ್ಲಿರುವ ಕಾರಣ ಸಾಂಪ್ರದಾಯಿಕವಾಗಿ ಆಚರಿಸಲು ಹೇಳಿದ್ದಾರೆ. ಪ್ರಾಯೋಜಕರು ಮುಂದೆ ಬಂದರೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಇಲ್ಲಿಯವರೆಗೆ ಯಾರೂ ಮುಂದೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸತ್ಯಾಂಶ ಮರೆಮಾಚಿ ರಾಜಕೀಯ ಮಾಡಬಾರದು: ಕಾವೇರಿ ನೀರಿನ ವಿಚಾರದಲ್ಲಿ ಸತ್ಯಾಂತ ಮರೆಮಾಚಿ ರಾಜಕೀಯ ಮಾಡಬಾರದು. ಬೆಂಗಳೂರು ಬಂದ್ ಶಾಂತಿಯುತವಾಗಿ ಆಚರಿಸಲು ನಮ್ಮದೇನೂ ತಕರಾರು ಇಲ್ಲ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ಮಾಡಬೇಕು ಎಂದರು. ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ, ಕಾವೇರಿ ನೀರು ಸಲಹಾ ಸಮಿತಿ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ನಲ್ಲಿ ಪ್ರಶ್ನೆಮಾಡಿದ್ದೆವು. ನಾವೇನೂ ತಾಂತ್ರಿಕ ತಜ್ಞರಲ್ಲವೆಂದು ಹೇಳಿ ನೀರು ಬಿಡಲು ಹೇಳಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮುಕ್ತ ಮನಸ್ಸಿನಿಂದ ಇರುವ ಕಾರಣ ನಮಗೆ ಅನುಕೂಲ ಆಗಬಹುದು ಎಂದರು.

ಮೇಕೆದಾಟು ಯೋಜನೆಯಿಂದ 67 ಟಿಎಂಸಿ ನೀರು ಸಿಗಲಿದೆ. ಇದರಿಂದ ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ. ಕೋರ್ಟ್ ಯೋಜನೆ ಬಗ್ಗೆ ಒಲವು ತೋರಿದಂತೆ ಕಂಡಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದರು.

ರಾಜ್ಯದಲ್ಲಿ ಸರ್ವಪಕ್ಷಗಳ ಸಭೆ ಮಾಡಲಾಗಿದೆ. ಹೊಸದಿಲ್ಲಿಯಲ್ಲಿ ಸಂಸದರು, ಸಚಿವರ ಸಭೆ ಮಾಡಿ ಚರ್ಚಿಸಲಾಗಿದೆ. ಕರ್ನಾಟಕ ಸಂದಿಗ್ದ ಪರಿಸ್ಥಿತಿಯಲ್ಲಿ ಇರುವಾಗ ಅಧಿಕಾರ ಮಾಡಿದವರು ಅರಿಯಬೇಕು. ಸತ್ಯಾಂತ ಮರೆಮಾಚಿ ರಾಜಕೀಯ ಮಾಡಬಾರದು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಆಡಳಿತ ಮಾಡಿದವರು. ಕಾನೂನಾತ್ಮಕ ವಿಚಾರಗಳು ಅವರಿಗೂ ಗೊತ್ತಿದೆ. ಹೀಗಿದ್ದರೂ ರಾಜಕೀಯದ ಮಾತುಗಳನ್ನಾಡುತ್ತಾರೆ ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್‌ನಲ್ಲಿ ಸೆ.27ರಂದು ಕಾವೇರಿ ವಿಚಾರ ಮತ್ತೆ ವಿಚಾರಣೆಗೆ ಬರುವುದರಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕಾವೇರಿ ಹೋರಾಟದಿಂದ ಪ್ರವಾಸೋದ್ಯಮದ ಮೇಲೆ ಯಾವ ಕರಿನೆರಳು ಬೀಳುವುದಿಲ್ಲ. ಇನ್ನು ಸಮಯ ಇರುವುದರಿಂದ ನೋಡೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next