ಶಿಲ್ಲಾಂಗ್: ದೇಶದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮುವ ಪಾತ್ರವಹಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ತಾನು ಮಾರ್ಚ್ ನಲ್ಲಿಯೇ ಕಾಂಗ್ರೆಸ್ ಪಕ್ಷ ತೊರೆದು ಟಿಎಂಸಿ ಸೇರಲು ನಿರ್ಧರಿಸಿದ್ದೆ ಎಂದು ಹೇಳಿದರು.
ಗುರುವಾರ(ನವೆಂಬರ್ 25) ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ,ಅವರು ಜನತೆಗೆ ಸೇವೆಯನ್ನು ನೀಡುವ ಬದ್ಧತೆಯಿಂದ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡಿದ್ದೇನೆ ಎಂದರು.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದೇವು. ಆದರೆ ನಮಗೆ ಅದು ಸಾಧ್ಯವಾಗಲಿಲ್ಲ. ಮತದಾನದ ನಂತರ ನಮ್ಮ ಪಕ್ಷದ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ನಡೆದವು ಎಂದು ಸಂಗ್ಮಾ ತಿಳಿಸಿದರು.
17 ಜನರ ಗುಂಪು ಒಟ್ಟಾಗುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ರಾಜ್ಯದ ಬಗೆಗಿನ ಬದ್ಧತೆ ಎಲ್ಲವನ್ನೂ ಮೀರಿಸಿದೆ. ಈವರೆಗೆ ನಾವು ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದೇವೆ.
“ ನನ್ನ ಅಭಿಪ್ರಾಯದ ಪ್ರಕಾರ, ಪ್ರಸ್ತುತ ದೇಶದಲ್ಲಿನ ರಾಜಕೀಯ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಮರ್ಥ ವಿಪಕ್ಷದ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಆದರೂ ನಾವು ದೇಶದ ಹಳೆಯ ಕಾಂಗ್ರೆಸ್ ಪಕ್ಷದಲ್ಲಿದ್ದು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವು. ದಯವಿಟ್ಟು ಕ್ಷಮಿಸಿ, ನಾವು ನಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದೇವೆ. ನಾವು ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಂಗ್ಮಾ ಹೇಳಿದರು.